Wednesday, June 3, 2026
Homeಜಿಲ್ಲಾಸುದ್ದಿಕೊಟ್ಟಿಗೆಹಾರ: ಮಲೆನಾಡಿನ ಮಡಿಲಲ್ಲಿ ಸರ್ವಧರ್ಮ ಸೌಹಾರ್ದತೆಯ ಸಂಕೇತ ಸಾರಲು ಸಜ್ಜಾದ ನೂತನ ಬದ್ರಿಯಾ ಜುಮ್ಮಾ ಮಸೀದಿ

ಕೊಟ್ಟಿಗೆಹಾರ: ಮಲೆನಾಡಿನ ಮಡಿಲಲ್ಲಿ ಸರ್ವಧರ್ಮ ಸೌಹಾರ್ದತೆಯ ಸಂಕೇತ ಸಾರಲು ಸಜ್ಜಾದ ನೂತನ ಬದ್ರಿಯಾ ಜುಮ್ಮಾ ಮಸೀದಿ

ಕೊಟ್ಟಿಗೆಹಾರ:ಹಸಿರು ಬೆಟ್ಟಗಳು, ತಂಪಾದ ವಾತಾವರಣ ಮತ್ತು ಸಹಬಾಳ್ವೆಯ ಸೊಬಗಿನಿಂದ ಗುರುತಿಸಿಕೊಂಡಿರುವ ಮಲೆನಾಡಿನ ಕೊಟ್ಟಿಗೆಹಾರ ಇದೀಗ ಮತ್ತೊಮ್ಮೆ ಸರ್ವಧರ್ಮ ಸೌಹಾರ್ದತೆಯ ಸಂದೇಶ ಸಾರಲು ಸಜ್ಜಾಗಿದೆ.

ಹೌದು ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹೊತ್ತಿರುವ ಬದ್ರಿಯಾ ಜುಮ್ಮಾ ಮಸೀದಿ ನೂತನ ಹಾಗೂ ಭವ್ಯ ರೂಪದಲ್ಲಿ ನಿರ್ಮಾಣಗೊಂಡಿದ್ದು, ಜೂನ್ 4 ಮತ್ತು 5ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದ ಮೂಲಕ ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದೆ.

ಕೊಟ್ಟಿಗೆಹಾರದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನೊಂದಿಗೆ ಬೆಸೆದಿರುವ ಈ ಮಸೀದಿ ಹಲವು ದಶಕಗಳಿಂದ ಸ್ಥಳೀಯ ಮುಸ್ಲಿಂ ಸಮುದಾಯದ ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿತ್ತು. ಹಿಂದೆ ಸಣ್ಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಸೀದಿ, ಅಂದಿನ ದಿನಗಳಲ್ಲಿ ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಮುಸ್ಲಿಂ ಭಕ್ತರಿಗೆ ಪ್ರಮುಖ ಆರಾಧನಾ ಕೇಂದ್ರವಾಗಿತ್ತು. ದೂರದ ಊರುಗಳಿಂದಲೂ ಜನರು ಇಲ್ಲಿಗೆ ಆಗಮಿಸಿ ನಮಾಜ್ (ಪ್ರಾರ್ಥನೆ)ಸಲ್ಲಿಸುತ್ತಿದ್ದರು.

ಕಾಲ ಬದಲಾದಂತೆ ಸಮುದಾಯದ ಅಗತ್ಯಗಳೂ ಹೆಚ್ಚಾದವು. ಹೊಸದಾಗಿ ವಿಶಾಲ, ಸುಸಜ್ಜಿತ ಮತ್ತು ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಮಸೀದಿ ನಿರ್ಮಿಸುವ ಕನಸು ಮೂಡಿತು. ಸಮುದಾಯದ ಹಿರಿಯರು, ಧಾರ್ಮಿಕ ಮುಖಂಡರು, ದಾನಿಗಳು ಮತ್ತು ಯುವಕರ ಒಗ್ಗಟ್ಟಿನ ಪ್ರಯತ್ನದಿಂದ ಆ ಕನಸು ಇಂದು ಸಾಕಾರಗೊಂಡಿದೆ.

ಆನೇಕ ಸವಾಲುಗಳ ನಡುವೆಯೂ ಮಸೀದಿ ಆಡಳಿತ ಮಂಡಳಿ ಮತ್ತು ಸದಸ್ಯರ ನಿರಂತರ ಪರಿಶ್ರಮದಿಂದ ಅಲ್ಪಾವಧಿಯಲ್ಲೇ ಭವ್ಯ ಕಟ್ಟಡ ತಲೆ ಎತ್ತಿದೆ.

ಮಲೆನಾಡಿನ ಹಸಿರು ಪ್ರಕೃತಿಯ ನಡುವೆ ನಿರ್ಮಾಣಗೊಂಡಿರುವ ಈ ನೂತನ ಮಸೀದಿಯ ಗೋಪುರಗಳು ದೂರದಿಂದಲೇ ಭಕ್ತರ ಗಮನ ಸೆಳೆಯುತ್ತವೆ. ತನ್ನ ಆಕರ್ಷಕ ವಾಸ್ತುಶಿಲ್ಪ ಮತ್ತು ಶಾಂತ ವಾತಾವರಣದಿಂದ ಈ ಕಟ್ಟಡ ಕೇವಲ ಧಾರ್ಮಿಕ ಕೇಂದ್ರವಾಗಿಯೇ ಅಲ್ಲ, ಪ್ರದೇಶದ ಹೆಮ್ಮೆಯ ಪ್ರತೀಕವಾಗಿಯೂ ಮೂಡಿಬಂದಿದೆ.


ಈ ಮಸೀದಿಯ ಮತ್ತೊಂದು ವಿಶೇಷತೆ ಎಂದರೆ, ಇದರ ಸಮೀಪದಲ್ಲೇ ಶ್ರೀರಾಮ ದೇವಸ್ಥಾನ ಹಾಗೂ ಯೇಸುವಿನ ಪವಿತ್ರ ಹೃದಯದ ದೇವಾಲಯ ನೆಲೆಸಿರುವುದು. ಮೂರು ಧರ್ಮಗಳ ಆರಾಧನಾ ಕೇಂದ್ರಗಳು ಒಂದೇ ಪ್ರದೇಶದಲ್ಲಿ ಸಹಬಾಳ್ವೆಯ ಸಂದೇಶ ಸಾರುತ್ತಿರುವುದು ಕೊಟ್ಟಿಗೆಹಾರದ ವೈಶಿಷ್ಟ್ಯವಾಗಿದೆ. ಧರ್ಮ ಭಿನ್ನವಾದರೂ ಮನಸ್ಸು ಒಂದೇ ಎಂಬ ಸಂದೇಶವನ್ನು ಈ ಪ್ರದೇಶ ವರ್ಷಗಳಿಂದ ಜೀವಂತವಾಗಿರಿಸಿಕೊಂಡಿದೆ.


ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ದೇವಾಲಯ, ಚರ್ಚ್ ಹಾಗೂ ಮಸೀದಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದರೆ, ಭಜನೆ, ಪ್ರಾರ್ಥನೆ ಮತ್ತು ಧಾರ್ಮಿಕ ಗಾಯನಗಳ ನಿನಾದಗಳು ಇಡೀ ಪ್ರದೇಶವನ್ನು ಭಕ್ತಿಮಯ ವಾತಾವರಣದಲ್ಲಿ ಮುಳುಗಿಸುತ್ತವೆ. ಪರಸ್ಪರ ಗೌರವ, ಸಹಕಾರ ಮತ್ತು ಸಹೋದರತ್ವದ ಮೌಲ್ಯಗಳು ಇಲ್ಲಿನ ಜನಜೀವನದ ಅವಿಭಾಜ್ಯ ಅಂಗವಾಗಿವೆ.
ಜೂನ್ 4ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಧರ್ಮಗಳ ಗುರುಗಳು, ಸಮಾಜದ ಮುಖಂಡರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಆಯೋಜಿಸಲಾಗಿರುವ ‘ಸೌಹಾರ್ದ ಸಂಗಮ’ ಕಾರ್ಯಕ್ರಮವು ಧಾರ್ಮಿಕ ಸಾಮರಸ್ಯ, ಸಾಮಾಜಿಕ ಏಕತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಮತ್ತಷ್ಟು ಬಲಪಡಿಸಲಿದೆ.

“ಎಲ್ಲ ಧರ್ಮಗಳ ಗುರುಗಳನ್ನು ಆಹ್ವಾನಿಸಿ ಸೌಹಾರ್ದತೆಯ ಸಂದೇಶ ಸಾರುವ ರೀತಿಯಲ್ಲಿ ಮಸೀದಿ ಉದ್ಘಾಟನೆ ನಡೆಸಲಾಗುತ್ತಿದೆ.

ಇದು ಕೇವಲ ಒಂದು ಕಟ್ಟಡದ ಉದ್ಘಾಟನೆಯಲ್ಲ; ಸಮಾಜದಲ್ಲಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ಮಹತ್ವದ ಕಾರ್ಯಕ್ರಮವಾಗಿದೆ,” ಎಂದು ಮಸೀದಿ ಅಧ್ಯಕ್ಷ ಮುನೀರ್ ತಿಳಿಸಿದ್ದಾರೆ.

ಮಲೆನಾಡಿನ ಮಡಿಲಿನಲ್ಲಿ ತಲೆ ಎತ್ತಿರುವ ನೂತನ ಬದ್ರಿಯಾ ಜುಮ್ಮಾ ಮಸೀದಿ, ಇಟ್ಟಿಗೆ ಮತ್ತು ಸಿಮೆಂಟ್‌ಗಳಿಂದ ನಿರ್ಮಾಣವಾದ ಕಟ್ಟಡ ಮಾತ್ರವಲ್ಲ; ಅದು ಧರ್ಮಗಳನ್ನು ಮೀರಿದ ಮಾನವೀಯತೆ, ಒಗ್ಗಟ್ಟು ಮತ್ತು ಸೌಹಾರ್ದತೆಯ ಜೀವಂತ ಪ್ರತೀಕವಾಗಿದೆ. ಅದರ ಉದ್ಘಾಟನೆ ಕೇವಲ ಮುಸ್ಲಿಂ ಸಮುದಾಯದ ಸಂಭ್ರಮವಲ್ಲ, ಕೊಟ್ಟಿಗೆಹಾರದ ಸಮಗ್ರ ಸಮಾಜದ ಹಬ್ಬವಾಗಿದ್ದು, ಮಲೆನಾಡಿನ ಸರ್ವಧರ್ಮ ಸಹಬಾಳ್ವೆಯ ಪರಂಪರೆಗೆ ಮತ್ತೊಂದು ಸುವರ್ಣ ಅಧ್ಯಾಯ ಸೇರ್ಪಡೆಯಾಗಲಿದೆ.

ವರದಿ-ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!