ಚಿಕ್ಕಮಗಳೂರು ಜಿಲ್ಲಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು ಮಳೆಗಾಲವನ್ನ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಜೂನ್ 4ರವರೆಗೆ ಕೇಂದ್ರ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ. ಕಳೆದ ಮುಂಗಾರು ಪೂರ್ವ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 153.2 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ. 4 ರಷ್ಟು ಕೊರತೆಯಾಗಿದೆ. ಕೊಪ್ಪ, ಶೃಂಗೇರಿ ಮತ್ತು ಕಳಸ ತಾಲೂಕುಗಳಲ್ಲಿ ಅಧಿಕ ಮಳೆಯಾಗಿದೆ. ಸದ್ಯ ಭದ್ರಾ ಜಲಾಶಯದಲ್ಲಿ 137.2 ಅಡಿ ನೀರು ಶೇಖರಣೆಯಾಗಿದೆ. ಮಳೆಗಾಲದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಜಿಲ್ಲೆಯಾದ್ಯಂತ ಒಟ್ಟು 34 ತಂಡಗಳನ್ನು ನಿಯೋಜಿಸಲಾಗಿದೆ.
ಏಪ್ರಿಲ್ ಮತ್ತು ಮೇ ತಿಂಗಳ ಮಳೆಯಿಂದಾಗಿ ಜಿಲ್ಲೆಯಲ್ಲಿ ವ್ಯಾಪಕ ಆಸ್ತಿ ಹಾನಿಯಾಗಿದೆ. ಒಟ್ಟು 1870 ವಿದ್ಯುತ್ ಕಂಬಗಳು, 37.40 ಕಿ.ಮೀ ವಿದ್ಯುತ್ ಮಾರ್ಗ ಹಾಗೂ ಎರಡು ಅಂಗನವಾಡಿ ಕಟ್ಟಡಗಳು ಹಾನಿಗೊಂಡಿವೆ. ಒಟ್ಟು 51 ಮನೆಗಳು ಭಾಗಶಃ ಹಾಗೂ 1 ಮನೆ ಪೂರ್ಣ ಹಾನಿಯಾಗಿದ್ದು, ನಿಯಮಾವಳಿಗಳಂತೆ ಕ್ರಮವಾಗಿ 6,500 ರೂ. ಮತ್ತು 1,20,000 ರೂ. ಪರಿಹಾರ ವಿತರಿಸಲಾಗುತ್ತಿದೆ. ಹಾಗೆಯೇ 26.58 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಡಿಸಿ ಸೂಚಿಸಿದ್ದಾರೆ. ವಿಪತ್ತು ನಿರ್ವಹಣೆಗೆ ಜಿಲ್ಲಾ ನಿಧಿಯಲ್ಲಿ 26.82 ಕೋಟಿ ರೂ. ಅನುದಾನ ಲಭ್ಯವಿದ್ದು, ಯಾವುದೇ ಆರ್ಥಿಕ ಕೊರತೆಯಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ತುರ್ತು ಸಂದರ್ಭಗಳ ಎದುರಿಸಲು ಮೂಡಿಗೆರೆ, ನರಸಿಂಹರಾಜಪುರ ಮತ್ತು ಚಿಕ್ಕಮಗಳೂರಿನಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ರಸ್ತೆ ಬ್ಲಾಕ್ ಹಾಗೂ ಭೂಕುಸಿತ ತಡೆಯಲು ಜೆಸಿಬಿ, ಹಿಟಾಚಿ ಮತ್ತು ಯಂತ್ರಗಳನ್ನು ಸನ್ನದ್ಧವಾಗಿಡಲಾಗಿದೆ. ತಹಶೀಲ್ದಾರರ ನೇತೃತ್ವದ ವಿಶೇಷ ತಂಡಗಳ ಜೊತೆಗೆ 561 ಗೃಹ ರಕ್ಷಕರು, 64 ಈಜುಗಾರರು ಹಾಗೂ 566 ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
