ಮೂಡಿಗೆರೆ: ಮಣ್ಣಿಕೆರೆ ಗ್ರಾಮದಲ್ಲಿ ಕೆಲ ಸಂಘಟಕರು ವಸತಿರಹಿತರಿಗೆ ನಿವೇಶನ ದೊರಕಿಸಿ ಕೊಡುವ ದೃಷ್ಟಿಯಿಂದ ಗುಡಿಸಲು ನಿರ್ಮಿಸಿಕೊಂಡು ಕಳೆದ 10 ದಿನದಿಂದ ಧರಣಿ ನಡೆಸುತ್ತಿದ್ದು, ಫಲಾನುಭವಿಗಳ ಆಯ್ಕೆಯನ್ನು ಕಾನೂನು ರೀತಿಯಲ್ಲಿ ತಾಲೂಕು ಆಡಳಿತ ಪಾರದರ್ಶವಾಗಿ ನಡೆಸಬೇಕೆಂದು ಮಣ್ಣಿಕೆರೆ ಗ್ರಾಮಸ್ಥ ಸುನೀಲ್ ಮಣ್ಣಿಕೆರೆ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಣ್ಣಿಕೆರೆ ಗ್ರಾಮದ ಸರ್ವೆ ನಂಬರ್ 144ರಲ್ಲಿ 3 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಇದೀಗ ಕೆಲ ಸಂಘಟನೆ ಮೂಲಕ ಸುಮಾರು 150ಕ್ಕೂ ಅಧಿಕ ಸಂಖ್ಯೆಯಲ್ಲಿ ನಿವೇಶನ ರಹಿತರು ಟೆಂಟ್ ನಿರ್ಮಿಸಿ ಧರಣಿ ನಡೆಸುತ್ತಿದ್ದಾರೆ. 2024ರವರೆಗೆ ಕಾನೂನು ಕೊರತೆಯಿದಿದ್ದರಿಂದ ತಾಲೂಕು ಆಡಳಿತ ನಿವೇಶನ ಹಂಚಿಕೆ ಮಾಡಿರಲಿಲ್ಲ. ಅಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿ ಮೊದಲು ಸ್ಥಳೀಯ ನಿರಾಶ್ರಿತರಿಗೆ ನಿವೇಶನ ನೀಡಲು ಮುಂದಾಗಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥ ಅವಿನಾಶ್ ಮಾತನಾಡಿ, ಮುಂದಿನ ಗ್ರಾ.ಪಂ. ಚುನಾವಣೆ ಎದುರಿಸುವ ಸಲುವಾಗಿ ಕೆಲವರು ಮಣ್ಣಿಕೆರೆ ಗ್ರಾಮದ ನಿವೇಶನ ರಹಿತರ ದಾರಿ ತಪ್ಪಿಸಿ ಧರಣಿ ನಡೆಸಲು ಮುಂದಾಗಿದ್ದಾರೆ. ಇದನ್ನು ನಿವೇಶನ ರಹಿತರು ಅರ್ಥ ಮಾಡಿಕೊಳ್ಳಬೇಕು. ಸಂಘಟನೆ ಮೂಲಕ ನೀಡಿರುವ ಪಟ್ಟಿಯನ್ನು ಅಧಿಕಾರಿಗಳು ಪರಿಶೀಲಿಸಿ, ಅಲ್ಲಿ ಸ್ಥಳೀಯ ಹಾಗೂ ಅರ್ಹರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಭಜರಂಗದಳದ ಮುಖಂಡ ಸಂತೋಷ್ ಮಾತನಾಡಿ, ಧರಣಿಯಲ್ಲಿ ಕೆಲ ಮಾಧ್ಯಮದವರು ಗೋ ರಕ್ಷಣೆ ಸೇರಿದಂತೆ ಇತರೇ ವಿಚಾರದ ಬಗ್ಗೆ ಮಾತನಾಡುವ ಹಿಂದೂ ಸಂಘಟನೆಗಳು ನಿವೇಶನ ರಹಿತರ ಪರವಾಗಿ ನಿಲ್ಲುತ್ತಿಲ್ಲವೆಂದು ಬಿಂಭಿಸಲಾಗುತ್ತಿದೆ. ನಮ್ಮದು ಗೋರಕ್ಷಣೆ ಮಾಡುವುದು ಪ್ರಮುಖ ಕಾರ್ಯ. ಇದರ ಜತೆಗೆ ನಿವೇಶನ ರಹಿತರ ಬೆಂಬಲಕ್ಕೂ ನಿಲ್ಲುತ್ತೇವೆಂದು ಹೇಳಿದರು
