ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯ ಬಗ್ಗೆ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ತೀವ್ರವಾಗಿ ಗುಡುಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಬ್ಬಾಳಿಕೆಯ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ನೀಡಿರುವ ಆಹ್ವಾನಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಟೌನ್‌ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಸಮೀಪದಲ್ಲೇ ಕೆಲವರು ಕೆಂಪು ಬಾವುಟ ಹಿಡಿದು ಯೋಜನೆ ಪರವಾಗಿ ಪ್ರತಿಭಟನೆ ನಡೆಸುತ್ತಿರುವುದು ಗಮನಾರ್ಹವಾಗಿದೆ. ಈ ಪ್ರತಿಭಟನೆಗೆ ಮುಖ್ಯಮಂತ್ರಿ ಅವರೇ ಪರೋಕ್ಷವಾಗಿ ಬೆಂಬಲ ನೀಡಿ ಕೆಲವರನ್ನು ಮುಂದಿಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಚಾರವಾಗಿ ಸಾರ್ವಜನಿಕ ಚರ್ಚೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರೂ, ಅವರ ಬದಲಿಗೆ ಇತರರನ್ನು ಕಳುಹಿಸಲಾಗಿದೆ ಎಂದು ಟೀಕಿಸಿದ ಅವರು, ಸ್ವಪ್ರತಿಷ್ಠೆಗಾಗಿ ಯೋಜನೆಯನ್ನು ಯಾವುದೇ ಬೆಲೆಗೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಯಾವುದೇ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸುವ ಮೊದಲು ಭೂಮಿ ಕಳೆದುಕೊಳ್ಳುವ ರೈತರೊಂದಿಗೆ ನೇರವಾಗಿ ಚರ್ಚಿಸಬೇಕು. ನೈಸ್ ಯೋಜನೆ ಜಾರಿಗೆ ಬಂದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರೈತರ ಮಧ್ಯೆ ತೆರಳಿ ಸಭೆ ನಡೆಸಿದ್ದರು. ಆದರೆ ಈಗಿನ ಸರ್ಕಾರ ರೈತರ ಅಭಿಪ್ರಾಯವನ್ನೇ ಕಡೆಗಣಿಸಿ ದಬ್ಬಾಳಿಕೆ ನಡೆಸುತ್ತಿದೆ ಎಂದು ದೂರಿದರು.
ಇದೇ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ೧೨ ಮಂದಿ ಶಾಸಕರು ಅಡ್ಡಮತದಾನ ಮಾಡಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, ಇದರ ಹಿಂದೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತಪಡಿಸಿದರು. ಅನುದಾನ ಸೇರಿದಂತೆ ವಿವಿಧ ಆಮಿಷಗಳನ್ನು ಒಡ್ಡಿ ಶಾಸಕರನ್ನು ಸೆಳೆದಿರಬಹುದು. ಆದರೆ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
