Tuesday, July 7, 2026
Homeಉದ್ಯಮಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್ ನಿಧನ!

ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ್ ನಿಧನ!

Telegram Group
Join Now

ಮಂಗಳೂರು: ನೂರಾರು ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳ ಜನರ ಬದುಕಿಗೆ ಆಸರೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದ ಅಪರೂಪದ ತಾಂತ್ರಿಕ ಯೋಗಿ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಿರೀಶ್ ಭಾರದ್ವಾಜ್ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಮುಂಜಾನೆ ತೀವ್ರ ಅಸ್ವಸ್ಥಗೊಂಡ ಬಳಿಕ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ನದಿ, ಹಳ್ಳ-ಕೊಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡಿದ್ದ ನೂರಾರು ಹಳ್ಳಿಗಳಿಗೆ ತೂಗುಸೇತುವೆಗಳ ಮೂಲಕ ಗಿರೀಶ್ ಭಾರದ್ವಾಜ್ ಕೊಂಡಿಯಾಗಿದ್ದರು. ಅವರ ಅಗಲಿಕೆ ಗ್ರಾಮೀಣ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ಬಹುದೊಡ್ಡ ಕಂಪನಿಗಳ ಆಕರ್ಷಕ ಉದ್ಯೋಗದ ಆಫರ್‌ಗಳನ್ನು ಬದಿಗೊತ್ತಿ ಗ್ರಾಮೀಣ ಜನರ ಸಬಲೀಕರಣಕ್ಕೆ ಶ್ರಮಿಸಿದರು. ಸರ್ಕಾರಿ ವ್ಯವಸ್ಥೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕೈಚೆಲ್ಲುವ ಜಾಗದಲ್ಲಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ನಿರ್ಮಿಸಬಹುದಾದ ಪರಿಸರಸ್ನೇಹಿ ತೂಗುಸೇತುವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿನ್ಯಾಸಗೊಳಿಸಿ ದೇಶಾದ್ಯಂತ ಕ್ರಾಂತಿ ಸೃಷ್ಟಿಸಿದ್ದರು.

 ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಇವರು ನಿರ್ಮಿಸಿದ್ದಾರೆ. ಆದ್ದರಿಂದ ಇವರು ಬ್ರಿಡ್ಜ್ ಮ್ಯಾನ್, ತೂಗುಸೇತುವೆಗಳ ಸರದಾರ ಎಂದು ಖ್ಯಾತಿಯಾಗಿದ್ದಾರೆ.

ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ನಾಡಿನ ಗಣ್ಯರು, ತಾಂತ್ರಿಕ ವಲಯದ ತಜ್ಞರು ಹಾಗೂ ಗ್ರಾಮೀಣ ಭಾಗದ ಜನತೆ ತೀವ್ರ ಕಂಬನಿ ಮಿಡಿದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments