ಮೂಡಿಗೆರೆ: ಚಿಕ್ಕಮಗಳೂರಿನಲ್ಲಿ ವರುಣನ ರೌದ್ರಾವತಾರ ಮುಂದುವರಿದಿದ್ದು, ನಿರಂತರ ಮಳೆ ಮತ್ತು ಗಾಳಿಯಿಂದಾಗಿ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ನಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಬೃಹತ್ ಬಂಡೆಗಳು ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ.
ಹಾಗೆ ಭಾರಿ ಮಳೆಯಿಂದಾಗಿ ಘಾಟಿಯ ಮೇಲ್ಭಾಗದ ನೀರು ರಭಸವಾಗಿ ಹರಿದು ಬರುತ್ತಿದ್ದು, ಗುಡ್ಡದ ಮಣ್ಣು ಸಡಿಲಗೊಂಡು ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಬಿದಿರುತಳ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮಣ್ಣಿನೊಂದಿಗೆ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದ ಘಟನೆಗಳು ನಡೆದಿವೆ. ಅದೃಷ್ಟವಶಾತ್, ಮಣ್ಣು ರಸ್ತೆಯ ಮುಖ್ಯ ಭಾಗಕ್ಕೆ ಕುಸಿಯದ ಕಾರಣ ಸಂಚಾರಕ್ಕೆ ದೊಡ್ಡ ಮಟ್ಟದ ಅಡಚಣೆಯಾಗಿಲ್ಲ. ಆದರೆ, ಘಾಟಿ ರಸ್ತೆಯ ಚರಂಡಿಗಳಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ.
ಗುಡ್ಡ ಕುಸಿತ ಸಂಭವಿಸಿದ್ದರೂ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದುವರೆಗೆ ತೆರವು ಕಾರ್ಯಾಚರಣೆ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳೀಯರ ತಂಡ ಸ್ವತಃ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದೆ.
ಮಳೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಭೂಕುಸಿತ ಸಂಭವಿಸುವ ಭೀತಿ ಇದೆ. ಇದರಿಂದ ಸಂಪೂರ್ಣ ಸಂಚಾರ ಸ್ಥಗಿತಗೊಳ್ಳುವ ಆತಂಕ ವ್ಯಕ್ತವಾಗಿದೆ.
