ಶೃಂಗೇರಿ: ತುಂಗಾ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಕುರುಬಗೆರೆಯ ಸಮೀಪ ನಡೆದಿದೆ.
ಮೃತರನ್ನು ನಾಗೇಶ್ ಎಂದು ಗುರುತಿಸಲಾಗಿದೆ. ಅವರು ಜುಲೈ 9ರಂದು ಸಂಜೆ ಶೃಂಗೇರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದು, ಬಳಿಕ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಭಾನುವಾರ ಸಂಜೆ ಕುರುಬಗೆರೆಯ ರಾಘು ಅವರ ಟೈರ್ ಅಂಗಡಿ ಹಿಂಭಾಗದ ತುಂಗಾ ನದಿಯ ದಂಡೆಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ಸ್ಥಳಕ್ಕೆ ತೆರಳಿದ ಪತ್ನಿ ಮೃತದೇಹವನ್ನು ನಾಗೇಶ್ ಅವರದ್ದೆಂದು ಗುರುತಿಸಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ನಾಗೇಶ್ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಇದೇ ಕಾರಣದಿಂದ ತುಂಗಾ ನದಿಗೆ ಹಾರಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
