ಚಿಕ್ಕಮಗಳೂರು: ಪೂಜೆಯ ನೆಪದಲ್ಲಿ ಯುವತಿಯನ್ನು ಬಾಡಿಗೆ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪದ ಮೇಲೆ ದೇವಸ್ಥಾನದ ಅರ್ಚಕನ ವಿರುದ್ಧ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಬಾಸ್ಕಲ್ ಸಮೀಪದ ನೆರಡಿ ಗ್ರಾಮದ ಪಂಜುರ್ಲಿ ದೇವಸ್ಥಾನದ ಅರ್ಚಕ ಶ್ರೀಧರ್ (54) ಆರೋಪಿ ಎಂದು ಗುರುತಿಸಲಾಗಿದೆ.
ಯುವತಿಯ ದೂರಿನ ಪ್ರಕಾರ, ಆರೋಪಿ ಚಿಕ್ಕಮಗಳೂರು ನಗರದ ತನ್ನ ಬಾಡಿಗೆ ಮನೆಗೆ ಪೂಜೆಯ ನೆಪದಲ್ಲಿ ಕರೆಸಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕುಟುಂಬದವರಿಗೆ ತೊಂದರೆ ಉಂಟು ಮಾಡುವುದಾಗಿ ಬೆದರಿಕೆ ಹಾಕಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಆರೋಪಿಯ ನಿರಂತರ ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆಯಿಂದ ನೊಂದ ಯುವತಿ ಪ್ರಸ್ತುತ 7 ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚೆಗೆ ಈ ವಿಷಯ ಕುಟುಂಬದವರಿಗೆ ತಿಳಿದು ಬಂದಿದೆ. ಬಳಿಕ ಕುಟುಂಬಸ್ಥರು ಚಿಕ್ಕಮಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಶ್ರೀಧರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
