ಮೂಡಿಗೆರೆ: ಕಂಬಳದ ಕೆಸರುಗದ್ದೆಯನ್ನು ನೋಡಲು ಕರಾವಳಿಗೇ ಹೋಗಬೇಕಾಗಿಲ್ಲ, ಮೂಡಿಗೆರೆ ತಾಲ್ಲೂಕಿನ ಬೆಟ್ಟಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳೂರಿಗೆ ಬಂದರೆ ಸಾಕು! ಮಳೆಗಾಲ ಬಂತೆಂದರೆ ಮಲೆನಾಡಿನ ರಸ್ತೆಗಳ ಪಾಡು ಹೀಗೆಯೇ ಎನ್ನುವಂತಾಗಿದ್ದು, ಇಲ್ಲಿನ ದುಸ್ಥಿತಿಯನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ.
ಕೆಸರು ಹಳ್ಳ ದಾಟಿಯೇ ಶಾಲೆಗೆ ಬರಬೇಕು ಮಕ್ಕಳು!
ಕೋಳೂರು ಗ್ರಾಮದ ಈ ರಸ್ತೆಯಲ್ಲಿ ನಿಂತಿರುವ ವಿದ್ಯಾರ್ಥಿಗಳು ಪಕ್ಕದ ಹಳಿಕೆ ಗ್ರಾಮದವರಾಗಿದ್ದು, ಅವರು ಪ್ರತಿನಿತ್ಯ ಇದೇ ಕೆಸರು ಹಳ್ಳವನ್ನು ದಾಟಿಕೊಂಡೇ ಕೋಳೂರಿನ ಶಾಲೆಗೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲಿನ ಚಿತ್ರಣವನ್ನು ನೋಡಿದರೆ ಪುಟ್ಟ ಕಣ್ಮಣಿಗಳ ಕಷ್ಟ ಯಾರಿಗಾದರೂ ಅರ್ಥವಾಗುತ್ತದೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಕೋಳೂರು ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಪ್ರತಿನಿತ್ಯ ಇದೇ ಕೆಸರು ರಸ್ತೆಯಲ್ಲೇ ಓಡಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ತೋಟದ ಮಾಲೀಕರ ತಕರಾರು – ಪಂಚಾಯತ್ ಮೌನ!
ರಸ್ತೆಯಲ್ಲಿ ನಿಂತಿರುವ ನೀರನ್ನು ಪಕ್ಕದ ತೋಟಕ್ಕೆ ಹರಿಸೋಣವೆಂದರೆ ಅಲ್ಲಿನ ತೋಟದ ಮಾಲೀಕರು ತಕರಾರು ತೆಗೆಯುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಬೆಟ್ಟಿಗೆರೆ ಗ್ರಾಮ ಪಂಚಾಯತಿಯವರಂತೂ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಮನವಿ:
ಗ್ರಾಮ ಪಂಚಾಯತ್ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಈ ವಿಡಿಯೋ ಹಾಗೂ ವರದಿ ಮೂಡಿಗೆರೆಯ ಶಾಸಕರಿಗೆ ತಲುಪುವಂತಾಗಲು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ದಯಮಾಡಿ ಶೇರ್ ಮಾಡಬೇಕಾಗಿ ವಿನಂತಿಸಲಾಗಿದೆ.
