ಚಿಕ್ಕಮಗಳೂರು: ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ 2021ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರು ಆಯ್ಕೆಯಾಗಿದ್ದನ್ನು ಅಸಿಂಧುಗೊಳಿಸಿರುವ ಹೈಕೋರ್ಟ್, ಕಾಂಗ್ರೆಸ್ ಪಕ್ಷದ ಗಾಯತ್ರಿ ಶಾಂತೇಗೌಡ ವಿಜೇತ ಅಭ್ಯರ್ಥಿ ಎಂದು ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಎಂ.ಕೆ.ಪ್ರಾಣೇಶ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತೀರ್ಪಿನ ಬಗ್ಗೆ ವಾಲ್ ಹಾಕಿಕೊಂಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವೇ ನೀಡಿದ ಆದೇಶದಂತೆ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಅದರ ಅನ್ವಯದಂತೆ ನಡೆದ ಚುನಾವಣೆಯಲ್ಲಿ ನಾನು ಗೆಲುವು ಪಡೆದಿದ್ದೆ. ಆದರೆ ಈಗ ನಾಮನಿರ್ದೇಶಿತ ಸದಸ್ಯರ ಮತಗಳು ಅನರ್ಹ ಎಂದು ನ್ಯಾಯಾಲಯಗಳಲ್ಲಿ ತೀರ್ಪು ಬಂದಿದೆ. ಈ ತೀರ್ಪಿಗೆ ನಾನು ತಲೆಬಾಗುತ್ತೇನೆ. ವಿಶೇಷವೆಂದರೆ ವಿಧಾನ ಪರಿಷತ್ತಿನಲ್ಲಿ ಇಲ್ಲಿಯವರೆಗೆ ಗೆದ್ದವರೆಲ್ಲರು ನಾಮನಿರ್ದೇಶಿತ ಮತಗಳನ್ನು ಪಡೆದುಕೊಂಡಿದ್ದಾರೆ. ಇಡೀ ದೇಶದಲ್ಲಿ ನಾಮನಿರ್ದೇಶಿತ ಸದಸ್ಯರ ಮತಗಳಲ್ಲಿ ಜಯಗಳಿಸಿದವರ ಮಧ್ಯೆ ಕೇವಲ ನನಗೆ ಮಾತ್ರ ಈ ಆದೇಶ ಅನ್ವಯವಾಗಿದ್ದು ಬೇಸರದ ಸಂಗತಿ.
ಶ್ರೀಮತಿ ಗಾಯತ್ರಿ ಶಾಂತೇಗೌಡರು ಈ ಹಿಂದೆ ಗೆದ್ದಾಗಲು ಕೂಡ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿದ್ದರು. 1997 ರಿಂದಲೂ ಬಂದ ನಡಾವಳಿಯಾಗಿದ್ದು, ಇದು ಚುನಾವಣಾ ಆಯೋಗ ಕೊಟ್ಟ ಹಕ್ಕಾಗಿತ್ತು. ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶದಲ್ಲಿ 1997 ರಿಂದ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿದ್ದಾರೆ.
ನಾನು ಯಾವುದೇ ಚುನಾವಣಾ ಅಕ್ರಮವನ್ನು ಮಾಡಿರುವುದಿಲ್ಲ.ನನ್ನ ಗೆಲುವಿನ ಅಂತರ ಕಡಿಮೆ ಇರುವುದರಿಂದ ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋದ ಪರಿಣಾಮ ಈ ರೀತಿ ಆದೇಶ ಬಂದಿದೆ. ಜನತಾ ನ್ಯಾಯಾಲಯದಲ್ಲಿ ನನಗೆ ಸಿಕ್ಕಿದ್ದ ಗೆಲುವು ಕಾನೂನು ಹೋರಾಟದಲ್ಲಿ ವ್ಯತಿರಿಕ್ತವಾಗಿದೆ.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿಧಾನ ಪರಿಷತ್ ಸದಸ್ಯನಾಗಿ, ಉಪ ಸಭಾಪತಿಯಾಗಿ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ, ಭ್ರಷ್ಟಾಚಾರ ರಹಿತವಾಗಿ, ಪಕ್ಷಾತೀತವಾಗಿ, ದ್ವೇಷ ರಾಜಕಾರಣ ಮಾಡದೆ ಶ್ಯೆಕ್ಷಣಿಕ, ಸಾಮಾಜಿಕ ಹಾಗೂ ಧರ್ಮನಿಷ್ಠೆಯಿಂದ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಹಗಲಿರುಳು ಸಾರ್ವಜನಿಕ ಏಳಿಗೆಗಾಗಿ ಶ್ರಮಿಸಿದ್ದೇನೆ. ಈ ಅವಧಿಯಲ್ಲಿ ನನಗೆ ಸಹಕಾರ ಮಾಡಿದ ಎಲ್ಲರಿಗೂ ಧನ್ಯವಾದಗಳು.
ನನ್ನ ಮೇಲೆ ನಂಬಿಕೆ ಇಟ್ಟ ನನ್ನ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯದ ನಾಯಕರಿಗೆ ಹಿರಿಯರು, ಕಿರಿಯರು, ಸ್ನೇಹಿತರು, ಹಿತೈಷಿಗಳು ಹಾಗೂ ಕಾರ್ಯಕರ್ತ ಬಂಧುಗಳು, ಚಿಕ್ಕಮಗಳೂರು ಜಿಲ್ಲೆಯ ಗ್ರಾಮಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಹಾಗೂ ನಾಮನಿರ್ದೇಶಿತ ಸದಸ್ಯರಿಗೆ ನಾನು ಅಭಾರಿಯಾಗಿರುತ್ತೇನೆ.
ವಿಶೇಷವಾಗಿ ನನ್ನ ಪ್ರೀತಿಯ ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ.
ಈಗಾಗಲೇ ನಾನು ನನ್ನ ಉಪ ಸಭಾಪತಿ ಹುದ್ದೆ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಭಾಪತಿಗಳಿಗೆ ರಾಜೀನಾಮೆ ಸಲ್ಲಿಸಿದ್ದೇನೆ.
ನನ್ನ ಪರಿಷತ್ ಸದಸ್ಯತ್ವ ಹಾಗು ಉಪ ಸಭಾಪತಿ ಅವಧಿಯಲ್ಲಿ ಸಹಕಾರ ನೀಡಿದ ಹಿಂದಿನ ಸರ್ಕಾರ ಹಾಗೂ ಈಗಿನ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸಚಿವರು, ಶಾಸಕರು ವಿಧಾನ ಪರಿಷತ್ ಸಭಾಪತಿ, ಮಾಜಿ ಹಾಗೂ ಹಾಲಿ ಸಚಿವರು, ಶಾಸಕರುಗಳು, ಅಧಿಕಾರಿಗಳು ಮತ್ತು ವಿವಿದ ರಾಜಕೀಯ ಪಕ್ಷದ ನಾಯಕರುಗಳಿಗೆ ಧನ್ಯವಾದಗಳು ಸಲ್ಲಿಸುತ್ತೇನೆ.
ಈ ತೀರ್ಪಿನಿಂದ ಯಾರೂ ಕೂಡ ಎದೆಗುಂದಬೇಕಾಗಿಲ್ಲ ನಾನು ಅಧಿಕಾರವನ್ನು ಕಳೆದುಕೊಂಡಿರಬಹುದು ಆದರೆ ಪಕ್ಷದ ಕಾರ್ಯಕರ್ತನಾಗಿ ನಿಮ್ಮ ಜೊತೆ ನಾನು ಸದಾ ನಿಲ್ಲುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಕ್ತಿಯುತವಾಗಿ ಮುನ್ನಡೆಯೋಣ.
ನೂತನವಾಗಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿರುವ ಸಹೋದರಿ ಶ್ರೀಮತಿ ಗಾಯತ್ರಿ ಶಾಂತೇಗೌಡ ಅವರಿಗೆ ಶುಭ ಹಾರೈಸುತ್ತೇನೆ. ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
