ಚಿಕ್ಕಮಗಳೂರು: ಕಾಫಿನಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮೂಡಿಗೆರೆಯ ದೇವರಮನೆ ಬೆಟ್ಟಕ್ಕೆ ಬಂದಿದ್ದ ಬೆಂಗಳೂರು ಮೂಲದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ನರೇಶ್ (26) ಮೃತ ಯುವಕ. ನರೇಶ್ ಮೂಲತಃ ಕಲಬುರುಗಿ ಜಿಲ್ಲೆಯವನು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ವೀಕ್ ಎಂಡ್ ಆಗಿದ್ದರಿಂದ ಸ್ನೇಹಿತರ ಜೊತೆ ಬೆಂಗಳೂರಿನಿಂದ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡ ತಾಣಕ್ಕೆ ಬಂದಿದ್ದ.
ದೇವರಮನೆ ಬೆಟ್ಟದ ಸೌಂದರ್ಯ ಸವಿದು ಹಿಂದಿರುಗುವಾಗ ರಸ್ತೆ ಮಧ್ಯೆ ತುಂತುರು ಮಳೆಯಲ್ಲಿ ಕೋಟ್ ಹಾಕಿಕೊಳ್ಳಲು ನರೇಶ್ ಬೈಕ್ ನಿಲ್ಲಿಸಿದ್ದ. ಈ ವೇಳೆ ಕೋಟ್ ಹಾಕಿಕೊಳ್ಳುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ನರೇಶ್‌ನನ್ನ ಸ್ಥಳಿಯರು ಹಾಗೂ ಜೊತೆಗಿದ್ದ ಸ್ನೇಹಿತರು ಸೇರಿ ಸಮಾಜ ಸೇವಕ ಆರೀಫ್ ಅವರ ಆಂಬುಲೆನ್ಸ್‌ನಲ್ಲಿ ಕೂಡಲೇ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನರೇಶ್ ಸಾವನ್ನಪ್ಪಿದ್ದಾನೆ.
ಜೊತೆಗೆ ಬಂದ ಸ್ನೇಹಿತನ ಸಾವು ಕಂಡು ನರೇಶ್ ಸ್ನೇಹಿತರು ಕಣ್ಣೀರಿಟ್ಟಿದ್ದಾರೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
