ಚಿಕ್ಕಮಗಳೂರು: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು ಹೋಗಿರುವ ಘಟನೆ ತರೀಕೆರೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಕಳವುಗೀಡಾದ ಶ್ರೀಗಂಧದ ಮರಗಳ ಅಂದಾಜು ಮೌಲ್ಯ ಸುಮಾರು ₹5 ಲಕ್ಷ ಎಂದು ತಿಳಿದುಬಂದಿದೆ.
ಶಿವಪುರ ಗ್ರಾಮದ ಟಿ.ಎನ್. ವಿಷುಕುಮಾರ್ ಎಂಬುವರಿಗೆ ಅಮೃತಾಪುರ ಹೋಬಳಿಯ ಶಿವಪುರ ಗ್ರಾಮದಲ್ಲಿ ಸರ್ವೆ ನಂಬರ್ 98 ಮತ್ತು 99ರಲ್ಲಿ ಒಟ್ಟು 18 ಎಕರೆ ಜಮೀನಿದ್ದು, ಕಳೆದ ಸುಮಾರು 9 ವರ್ಷಗಳಿಂದ ತೋಟಗಾರಿಕೆ ಬೆಳೆಗಳೊಂದಿಗೆ ಶ್ರೀಗಂಧದ ಮರಗಳನ್ನು ಬೆಳೆಸುತ್ತಿದ್ದರು.
ಆಗಸ್ಟ್ 13ರಂದು ಸಂಜೆ ಸುಮಾರು 5.30ಕ್ಕೆ ತೋಟಕ್ಕೆ ತೆರಳಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬಂದಿದ್ದರು. ಮರುದಿನ ಆಗಸ್ಟ್ 14ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಂದಿನಂತೆ ತೋಟಕ್ಕೆ ತೆರಳಿ ಪರಿಶೀಲಿಸಿದಾಗ ಸುಮಾರು 15 ಶ್ರೀಗಂಧದ ಮರಗಳನ್ನು ಯಾರೋ ಕಡಿದು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಕಳವುಗೀಡಾದ ಮರಗಳ ಅಂದಾಜು ಮೌಲ್ಯ ₹5 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ತಮ್ಮ ಸಂಘದಲ್ಲಿ ವಿಚಾರಣೆ ನಡೆಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ನಡೆಸಿದರೂ ಮರಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಬೀರೂರು ಪೊಲೀಸ್ ಠಾಣೆಯಲ್ಲಿ ಮೊ.ನಂ.121/2026ರಂತೆ ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 86, 87 ಹಾಗೂ ಬಿಎನ್ಎಸ್ ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಳವುಗೈದವರ ಪತ್ತೆ ಹಾಗೂ ಶ್ರೀಗಂಧದ ಮರಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
