ಶೃಂಗೇರಿ: ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ರೈತರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸುವ ಉದ್ದೇಶದಿಂದ ಸ್ಥಾಪಿಸಲಾದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಶೃಂಗೇರಿ ತಾಲ್ಲೂಕಿನ ನೂತನ ಕಚೇರಿಯನ್ನು ವಿಶ್ವನಾಥ್ ಗದ್ದೆಮನೆ ಅವರ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವನಾಥ್ ಗದ್ದೆಮನೆ ಅವರು, ರೈತರಿಗಾಗುತ್ತಿರುವ ತೊಂದರೆಗಳು, ಸರ್ಕಾರಗಳ ಕೆಲ ರೈತ ವಿರೋಧಿ ನೀತಿಗಳು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಂಘದ ಮೂಲಕ ಪರಿಣಾಮಕಾರಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ರೈತರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವುದು ಮತ್ತು ರೈತರ ಹಕ್ಕುಗಳ ರಕ್ಷಣೆಗೆ ಸಂಘಟಿತರಾಗಿ ಕಾರ್ಯನಿರ್ವಹಿಸುವುದು ರೈತ ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ, ಹಾಗೆಯೇ ರೈತರಿಗೆ ಉಪಯುಕ್ತವಾದ ಪಹಣಿಗಳನ್ನು ಕಚೇರಿಯಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ,ಗೌರವಾಧ್ಯಕ್ಷರಾದ ರಾಮಸ್ವಾಮಿ ಶೆಟ್ಟಿಗದ್ದೆ, ಶೃಂಗೇರಿ ತಾಲ್ಲೂಕು ಅಧ್ಯಕ್ಷರಾದ ಶಂಕ್ರಪ್ಪ ಗೇರ್‌ಬೈಲ್, ಕ್ಷೇತ್ರ ರೈತ ಒಕ್ಕೂಟದ ಉಪಾಧ್ಯಕ್ಷರಾದ ಎ ಎಸ್ ನಯನ, ತಾಲ್ಲೂಕು ಕಾರ್ಯಾಧ್ಯಕ್ಷರಾದ ನರೇಂದ್ರ ಹೆಗ್ಡೆ, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಹಾಗೂ ಹಲವು ರೈತ ಸಂಘಟನೆಗಳ ಮುಖಂಡರು,ರೈತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶೃಂಗೇರಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿತರಿಸುತ್ತಿರುವ ಶೈಕ್ಷಣಿಕ ಪರಿಕರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
