ಚಿಕ್ಕಮಗಳೂರು: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ವೇಳೆ ಡಿಸಿ ಕಚೇರಿಗೆ ಮುತ್ತಿಗೆಗೆ ಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿದಂತೆ ಹಲವರ ವಿರುದ್ದ ಚಿಕಮಗಳೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ, ಪೊಲೀಸ್ ಮೇಲೆ ಹಲ್ಲೆ, ತಳ್ಳಾಟ ನೂಕಾಟ ಮಾಡಿದ್ದಾರೆಂದು ಪೊಲೀಸ್ ಇನ್‌ಸ್ಪೆಕ್ಟರ್ ಅಭಯ ಪ್ರಕಾಶ್ ದೂರು ನೀಡಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಸಂತೋಷ್ ಕೊಟ್ಯಾನ್ ಸೇರಿದಂತೆ 40 ಜನರ ವಿರುದ್ಧ ಎಫ್‌ಐಆರ್ ಆಗಿದೆ. ಹತ್ತಾರು ಬಿಜೆಪಿ ಮಹಿಳಾ ಕಾರ್ಯಕರ್ತರ ಮೇಲೂ ಕೇಸ್ ದಾಖಲಾಗಿದೆ.
ಪ್ರತಿಭಟನೆ ವೇಳೆ ಪೊಲೀಸರು-ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕಾಟ-ತಳ್ಳಾಟ ನಡೆದಿತ್ತು. ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆದಿತ್ತು.
