Thursday, August 20, 2026
Homeಜಿಲ್ಲಾಸುದ್ದಿಚಾಮರಾಜನಗರ ಶೂಟೌಟ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹರ್ಷ ಮೇಲ್ವಿನ್ ಲಸ್ರಾದೋ ಆಗ್ರಹ

ಚಾಮರಾಜನಗರ ಶೂಟೌಟ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹರ್ಷ ಮೇಲ್ವಿನ್ ಲಸ್ರಾದೋ ಆಗ್ರಹ

Telegram Group
Join Now

ಚಿಕ್ಕಮಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಮೃತ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಹರ್ಷ ಮೇಲ್ವಿನ್ ಲಸ್ರಾದೋ ರವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹನೂರು ತಾಲೂಕಿನ ನಿವಾಸಿಗಳಾದ ಆಂಟನಿ ಸ್ವಾಮಿ (50), ಜಾನ್ ರೋಸ್ ಪೀಟರ್ (42) ಮತ್ತು ಆಂಟನಿ ಕುಮಾರ್ (33) ಅವರು ಭಾನುವಾರ ಮುಂಜಾನೆ ಹನೂರು ವನ್ಯಜೀವಿ ವಿಭಾಗದ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಯ ಅತಿರೇಕದ ಕ್ರಮದಿಂದ ಅಮಾಯಕ ಜೀವಗಳು ಬಲಿಯಾಗಿದ್ದು, ಮೂರು ಕುಟುಂಬಗಳನ್ನು ಅನಾಥವಾಗಿಸಿದೆ. ಯಾವುದೇ ತಪ್ಪು ಕಂಡುಬಂದಿದ್ದರೂ ಅವರನ್ನು ಬಂಧಿಸಿ ಕಾನೂನು ಪ್ರಕ್ರಿಯೆ ಅನುಸರಿಸಬೇಕಿತ್ತು. ಆದರೆ ನೇರವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಅರಣ್ಯ ಇಲಾಖೆ ಸಿಬ್ಬಂದಿಯ ಈ ಅಮಾನವೀಯ ವರ್ತನೆ ಕ್ರೈಸ್ತ ಸಮುದಾಯಕ್ಕೆ ತೀವ್ರ ಆಘಾತ ತಂದಿದೆ ಎಂದು ಅವರು ತಿಳಿಸಿದರು.

ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಪ್ರವೇಶ, ಬೇಟೆ ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ನಮ್ಮ ಸಮುದಾಯ ಎಂದಿಗೂ ಸಮರ್ಥಿಸುವುದಿಲ್ಲ. ಆದರೆ ಇಂತಹ ಆರೋಪಗಳೇ ಯಾರನ್ನಾದರೂ ಗುಂಡಿಕ್ಕಿ ಕೊಲ್ಲಲು ಸಮರ್ಥನೆಯಾಗುವುದಿಲ್ಲ. ಈ ಘಟನೆಯ ಸತ್ಯಾಂಶ ಹೊರತರುವ, ಜವಾಬ್ದಾರಿ ನಿಗದಿಪಡಿಸುವ ಮತ್ತು ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

ಘಟನೆಯ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಜೀವಕ್ಕೆ ತಕ್ಷಣದ ಅಪಾಯವಿತ್ತೇ ಎಂಬ ಪ್ರಶ್ನೆಗೂ ಸ್ವತಂತ್ರ ತನಿಖೆಯ ಮೂಲಕವೇ ಉತ್ತರ ದೊರೆಯಬೇಕು. ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿಯ ಪಾತ್ರವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಹರ್ಷ ಮೇಲ್ವಿನ್ ಲಸ್ರಾದೋ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments