ಕೊಟ್ಟಿಗೆಹಾರ: ಬೆಂಗಳೂರಿಗೆ ತೆರಳಿದ್ದ ಬಣಕಲ್‌ನ ಇಂದಿರಾನಗರ ನಿವಾಸಿ ಇಬ್ರಾಹಿಂ ಬಿನ್ ಲೇಟ್ ಬಶೀರ್ ಅಹಮದ್ (35) ನಾಪತ್ತೆಯಾಗಿರುವ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಾರೆ.
ಚಿಕ್ಕಮಗಳೂರು ನಗರದ ಶಾಂತಿನಗರ ಮೂಲದ ಇಬ್ರಾಹಿಂ ಅವರು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಕಳೆದ 14 ವರ್ಷಗಳಿಂದ ಬಣಕಲ್‌ನಲ್ಲಿ ನೆಲೆಸಿದ್ದರು. ಇತ್ತೀಚೆಗೆ ಸ್ವಿಫ್ಟ್ ಡಿಜೈರ್ ಕಾರು ಖರೀದಿಸಿ ಬಾಡಿಗೆಗೆ ಓಡಿಸುತ್ತಿದ್ದರು ಎನ್ನಲಾಗಿದೆ.
ಪತ್ನಿಯ ಹೆಸರಿನಲ್ಲಿದ್ದ ಬ್ರೆಝಾ ಕಾರನ್ನು ಬೆಂಗಳೂರಿಗೆ ಬಾಡಿಗೆಗೆ ಕೊಂಡೊಯ್ಯುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದರು. ಬಳಿಕ ದೂರವಾಣಿ ಮೂಲಕ ಪತ್ನಿಯೊಂದಿಗೆ ಮಾತನಾಡಿ ಬೆಂಗಳೂರಿನಲ್ಲಿರುವುದಾಗಿ ತಿಳಿಸುತ್ತಿದ್ದರು. ಶೀಘ್ರದಲ್ಲೇ ಮನೆಗೆ ಬರುವುದಾಗಿ ಭರವಸೆ ನೀಡಿದ್ದ ಅವರು, ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಕುಟುಂಬಸ್ಥರು ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಬ್ರಾಹಿಂ ಅವರ ಬಗ್ಗೆ ಮಾಹಿತಿ ಇರುವವರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಕುಟುಂಬದವರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
