Thursday, August 20, 2026
Homeಕ್ರೈಮ್ಸ್ನಾನಕ್ಕೆ ತೆರಳಿದ ತಾಯಿ–ಮಗು ಮತ್ತೆ ಹೊರಬರಲಿಲ್ಲ: ಗ್ಯಾಸ್ ಗೀಸರ್ ಅನಿಲ ಸೋರಿಕೆಯಿಂದ ದುರಂತ ಶಂಕೆ

ಸ್ನಾನಕ್ಕೆ ತೆರಳಿದ ತಾಯಿ–ಮಗು ಮತ್ತೆ ಹೊರಬರಲಿಲ್ಲ: ಗ್ಯಾಸ್ ಗೀಸರ್ ಅನಿಲ ಸೋರಿಕೆಯಿಂದ ದುರಂತ ಶಂಕೆ

Telegram Group
Join Now

ಸಕಲೇಶಪುರ: ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ತಾಯಿ ಹಾಗೂ ಎರಡೂವರೆ ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಯಲಹಂಕ ಸಮೀಪದ ಬ್ಯಾಲದಕೆರೆಯಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದ ತೇಜಸ್ವಿನಿ (33) ಹಾಗೂ ಅವರ ಎರಡೂವರೆ ವರ್ಷದ ಪುತ್ರ ರಿತಿಕ್ ಮೃತ ದುರ್ದೈವಿಗಳು. ಘಟನೆಯಿಂದ ಹಾಲೇಬೇಲೂರು ಗ್ರಾಮ ಸೇರಿದಂತೆ ಮೃತರ ಕುಟುಂಬದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.

ಊಟಕ್ಕೆ ಬಂದಿದ್ದ ಪತಿ

ಹಾಲೇಬೇಲೂರು ಗ್ರಾಮದ ಮಂಜುನಾಥ್ ಅವರು ಬೆಂಗಳೂರಿನ ಯಲಹಂಕ ಸಮೀಪದ ಬ್ಯಾಲದಕೆರೆಯಲ್ಲಿ ಟೈಲರ್ ವೃತ್ತಿ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದರು. ಎಂದಿನಂತೆ ಬುಧವಾರ ಮಧ್ಯಾಹ್ನ ಕೆಲಸದ ಅಂಗಡಿಯಿಂದ ಮನೆಗೆ ಊಟಕ್ಕೆ ಬಂದಿದ್ದ ಅವರು, ಊಟ ಮುಗಿಸಿಕೊಂಡು ಮತ್ತೆ ಅಂಗಡಿಗೆ ತೆರಳಿದ್ದರು.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಂಜುನಾಥ್ ಅವರ ತಂದೆ–ತಾಯಿ ಕೂಡ ಮಗನ ಮನೆಗೆ ಆಗಮಿಸಿ ಹಬ್ಬದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು.

ಅರ್ಧ ಗಂಟೆಯಾದರೂ ಹೊರಬಾರದ ತಾಯಿ–ಮಗು

ಮಧ್ಯಾಹ್ನ ಸುಮಾರು 3.30ರ ವೇಳೆಗೆ ತೇಜಸ್ವಿನಿ ಅವರು ಪುತ್ರ ರಿತಿಕ್‌ನನ್ನು ಸ್ನಾನ ಮಾಡಿಸಲು ಬಾತ್‌ರೂಮ್‌ಗೆ ಕರೆದೊಯ್ದಿದ್ದರು. ಆದರೆ ಅರ್ಧ ಗಂಟೆಗೂ ಹೆಚ್ಚು ಸಮಯ ಕಳೆದರೂ ತಾಯಿ–ಮಗು ಹೊರಗೆ ಬಾರದಿರುವುದು ಮನೆಯಲ್ಲಿದ್ದ ಅತ್ತೆ–ಮಾವನ ಗಮನಕ್ಕೆ ಬಂದಿದೆ.

ಕಳವಳಗೊಂಡ ಅವರು ಬಾತ್‌ರೂಮ್ ಬಾಗಿಲು ತಟ್ಟಿ ಕರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ಪಕ್ಕದಲ್ಲಿದ್ದ ಮಂಜುನಾಥ್ ಅವರ ಅಂಗಡಿಗೆ ತೆರಳಿ ವಿಷಯ ತಿಳಿಸಿ ಅವರನ್ನು ಮನೆಗೆ ಕರೆತರಲಾಗಿದೆ.

ಬಾಗಿಲು ಒಡೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಮಂಜುನಾಥ್ ಅವರು ಮನೆಗೆ ಬಂದು ಬಾತ್‌ರೂಮ್ ಬಾಗಿಲು ಒಡೆದು ನೋಡಿದಾಗ ತೇಜಸ್ವಿನಿ ಹಾಗೂ ರಿತಿಕ್ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ತಾಯಿ–ಮಗು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಉಸಿರುಗಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದ್ದು, ಘಟನೆಯ ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ

ಮೃತದೇಹಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಘಟನೆಯ ಕುರಿತು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಯಿ–ಮಗು ಒಂದೇ ವೇಳೆ ದುರಂತ ಸಾವಿಗೀಡಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಹಾಲೇಬೇಲೂರು ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ಪುಟ್ಟ ರಿತಿಕ್‌ನನ್ನು ಕಳೆದುಕೊಂಡ ಕುಟುಂಬದ ನೋವು ಮತ್ತಷ್ಟು ದುಃಖಕ್ಕೆ ಕಾರಣವಾಗಿದ್ದು, ಬಂಧುಗಳು ಹಾಗೂ ಗ್ರಾಮಸ್ಥರು ಕುಟುಂಬಕ್ಕೆ ಸಾಂತ್ವನ ಸೂಚಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಶಾಸಕ ಸಿಮೆಂಟ್ ಮಂಜು ಅವರು ಮೃತರ ಕುಟುಂಬವನ್ನು ಸಂಪರ್ಕಿಸಿ ಸಂತಾಪ ಸೂಚಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments