Thursday, August 27, 2026
Homeಜಿಲ್ಲಾಸುದ್ದಿಜಾತಿ ಭೇದವಿಲ್ಲದೆ ಎಲ್ಲರೂ ಪರಸ್ಪರ ಗೌರವ ಹಾಗೂ ಸಹೋದರತ್ವದಿಂದ ಬದುಕಿದರೆ ಮಾತ್ರ ಜೀವನ ಸಾರ್ಥಕ: ಎಂ.ಆರ್.ಜಿಯಾವುಲ್ಲಾ

ಜಾತಿ ಭೇದವಿಲ್ಲದೆ ಎಲ್ಲರೂ ಪರಸ್ಪರ ಗೌರವ ಹಾಗೂ ಸಹೋದರತ್ವದಿಂದ ಬದುಕಿದರೆ ಮಾತ್ರ ಜೀವನ ಸಾರ್ಥಕ: ಎಂ.ಆರ್.ಜಿಯಾವುಲ್ಲಾ

Telegram Group
Join Now

ಮೂಡಿಗೆರೆ: ಅಂಜುಮಾನ್ ಈ-ಇಸ್ಲಾಮಿಯಾ ನೇತೃತ್ವದಲ್ಲಿ ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಬುಧವಾರ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಸುವ ಮೂಲಕ ಭಕ್ತಿಪೂರ್ವಕವಾಗಿ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು

ಈ ಸಂದರ್ಭದಲ್ಲಿ ಅಂಜುಮಾನ್ ಈ-ಇಸ್ಲಾಮಿಯಾ ಅಧ್ಯಕ್ಷರಾದ ಎಂ.ಆರ್.ಜಿಯಾವುಲ್ಲ ಮಾತನಾಡಿ, ಪ್ರವಾದಿ ಪೈಗಂಬರ್ ಅವರು ಮಾನವೀಯತೆ, ಪ್ರೀತಿ, ಕರುಣೆ, ಶಾಂತಿ, ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಪುರುಷರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಜಾತಿ, ಧರ್ಮ, ಭಾಷೆ ಎಂಬ ಭೇದವಿಲ್ಲದೆ ಎಲ್ಲರೂ ಪರಸ್ಪರ ಗೌರವದಿಂದ ಹಾಗೂ ಸಹೋದರತ್ವದಿಂದ ಬದುಕಬೇಕೆಂಬುದು ಈ ಹಬ್ಬದ ಪ್ರಮುಖ ಸಂದೇಶವಾಗಿದೆ. ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಬೇಕಾದರೆ ಪ್ರತಿಯೊಬ್ಬರೂ ಎಲ್ಲಾ ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೆ ಸಮಾಜದಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಬೆಸೆಯುವ ಸೇತುವೆಯಾಗಬೇಕೆಂದು ಹೇಳಿದರು.

ಈದ್ ಮಿಲಾದ್ ಅಂಗವಾಗಿ ತಾಲೂಕಿನಲ್ಲಿರುವ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರವಾದಿಯವರ ಜೀವನ, ಮಾನವೀಯತೆ, ಶಾಂತಿ, ಸಹೋದರತ್ವ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ಸ್ಮರಿಸಿದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಸಾರ್ವಜನಿಕರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಲ್ಲದೇ ಸಾರ್ವಜನಿಕರಿಗೆ ಸಿಹಿ ಹಂಚಿದರು. ಮೆರವಣಿಗೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಪೊಲೀಸ್ ವೃತ್ತ ನಿರೀಕ್ಷಿಕರಾದ ರಾಜಶೇಖರ್ ಹಾಗೂ ಠಾಣಾಧಿಕಾರಿ ಹರ್ಷವರ್ಧನ್ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಅಂಜುಮಾನ್ ಈ-ಇಸ್ಲಾಮಿಯಾ ಕಾರ್ಯದರ್ಶಿ ಖಾಲಿದ್ ಹುಸೇನ್, ಮುಖಂಡರಾದ ಮಹಮ್ಮದ್ ನೂರುಲ್ಲಾ, ಶಿರಾಗ್ ಫಾಜಿಲ್, ಬೈಕ್ ಅಣ್ಣು, ಫರಾಜ್ ಸೇರಿದಂತೆ ಮಕ್ಕಳು, ಯುವಕರು ಹಾಗೂ ಹಿರಿಯರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments