ಮೂಡಿಗೆರೆ: ದಿವಂಗತ ಎಸ್. ಜಾನಕಿ ಅವರ ಹಾಡುಗಳಲ್ಲಿ ಭಾವನೆ, ಸ್ಪಷ್ಟತೆ ಹಾಗೂ ಮಧುರತೆಯ ಅಪೂರ್ವ ಸಂಗಮವಿತ್ತು. ಅವರು ಹಾಡಿದ ಅನೇಕ ಗೀತೆಗಳು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಜೀವಂತವಾಗಿವೆ ಎಂದು ಕಸಾಪ ಜಿಲ್ಲಾ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಸವಿತಾ ನಾರಾಯಣ ಅವರು ಹೇಳಿದರು.
ಅವರು ಶುಕ್ರವಾರ ಅಡ್ಯಂತಾಯ ರಂಗಮಂದಿರದ ಎಂ.ಕೆ.ಇಂದಿರಾ ವೇದಿಕೆಯಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಅಮರಸ್ವರ ಎಸ್.ಜಾನಕಿ ಅವರ ಗಾನನಮನ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿವಂಗತ ಎಸ್.ಜಾನಕಿ ಅವರು ತಮ್ಮ ಅಪೂರ್ವ ಕಂಠಸಿರಿಯಿಂದ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿ ಮಹಿಳೆಯರ ಪಾಲಿನ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಅಲ್ಲದೆ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿ ನೀಡುವ ಮೂಲಕ ಕೋಟ್ಯಂತರ ಸಂಗೀತಾಭಿಮಾನಿಗಳ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಅಗಲಿಕೆ ಭಾರತೀಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್. ಜಾನಕಿ ಅವರ ಪ್ರಸಿದ್ಧ ಗೀತೆಗಳನ್ನು ಅಶ್ವಿನಿ ಸಂತೋಷ್, ನವ್ಯ, ಶೋಭಾ ಶ್ರೀನಿವಾಸ್, ಡಾ.ಕೆ.ಜಿ.ವಿಜಕುಮಾರಿ, ವೀಣಾ ಅರವಿಂದ್ ಅವರು ಹಾಡುವ ಮೂಲಕ ನಮನ ಸಲ್ಲಿಸಿದರು.
ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲೆ ಡಾ.ಪುಷ್ಪಾ ಭಾರತಿ ವಹಿಸಿದ್ದರು. ಜಿಲ್ಲಾ ಸಂಚಾಲಕರಾದ ಪದ್ಮಾ ಶ್ರೀನಿವಾಸ್, ರೂಪಾ ಬಂಗಾರ್ ಉಪಸ್ಥಿತರಿದ್ದರು.
