ಮೂಡಿಗೆರೆ: ಮಹಿಳೆಯರು ದೇಶವನ್ನು ಕಟ್ಟುವವರು. ಉತ್ತಮ ಪ್ರಜೆಗಳನ್ನು ಬೆಳೆಸುವಂತವರು. ಡಿಜಟಲ್ ಯುಗದಲ್ಲಿ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಕನ್ನಡ ಬಳಸುವುದನ್ನು ಕಲಿಸಬೇಕೆಂದು ಬೆಂಗಳೂರು ಜಯದೇವ ಆಸ್ಪತ್ರೆಯ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.
ಅವರು ಶುಕ್ರವಾರ ಅಡ್ಯಂತಾಯ ರಂಗಮಂದಿರದ ಎಂ.ಕೆ.ಇಂದಿರಾ ವೇದಿಕೆಯಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಮಹಿಳಾ ಸಬಲೀಕರಣ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ 6 ಸಾವಿರ ಸರಕಾರಿ ಶಾಲೆ ಮುಚ್ಚಿ ಹೋಗಿದೆ. 38 ಸಾವಿರ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ. ಇದನ್ನು ಸರಿಪಡಿಸಿ ಸರಕಾರಿ ಶಾಲೆ ಉಳಿಸಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದ ಅವರು, ಕನ್ನಡ ಶಾಲೆ ಉಳಿಸಿದರೆ ಕನ್ನಡ ಭಾಷೆ ಉಳಿಯುತ್ತದೆ. ಜತೆಗೆ ಕನ್ನಡ ಭಾಷೆಯನ್ನು ಪ್ರತಿನಿತ್ಯ ಮನೆ ಮನದಲ್ಲಿ ಬಳಸಿದರೆ ಕನ್ನಡ ಭಾಷೆ ತಾನಾಗಿಯೆ ಉಳಿಯುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರು ಐಡಿಎಸ್‌ಜಿ ಕಾಲೇಜು ಪ್ರಾದ್ಯಾಪಕಿ ಡಾ.ಶಿಲಾಲಿ ಮಾತನಾಡಿ, ಮೇರಿ ಕ್ಯೂರಿ, ಸುಧಾ ಮೂರ್ತಿ, ಕಿರಣ್ ಮೊಜುಂದರ್-ಶಾ, ಕಲ್ಪನಾಚಾವ್ಲಾರಂತರ ಅನೇಕ ಮಹಿಳೆಯರು ತಂತ್ರಜ್ಞಾನದ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಂತೆ ತಂತ್ರಜ್ಞಾನ ಬಳಸುವುದನ್ನು ಮಹಿಳೆಯರು ಕಲಿಯಬೇಕು. ಮೊಬೈಲ್‌ನ್ನು ಕೇವಲ ದಾರವಾಹಿ ಪಟ್ಟೆಗೆಗೆ ಮಾತ್ರ ಉಪಯೋಗಿಸುವುದಲ್ಲ. ಬದಲಾಗಿ ಅಲ್ಲಿ ಸಿಗುವ ಎಲ್ಲಾ ತಂತ್ರಜ್ಞಾನ ಬಳಕೆ ಮಾಡಿದರೆ ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕಿ ಸವಿತಾ ರಮೇಶ್ ಮಾತನಾಡಿ, ಫ್ಯಾಷನ್ ಪದ್ಧತಿಯಿಂದ ಮಕ್ಕಳೇ ಬೇಡವೆನ್ನುವ ಕಾಲಘಟ್ಟಕ್ಕೆ ಬಂದಿದ್ದೇವೆ. ಇದು ಅಪಾಯ. ಮನೆಯಲ್ಲಿ ಹಿರಿಯರನ್ನು ಗೌರವದಿಂದ ಕಾಣಬೇಕು. ಇಲ್ಲವಾದರೆ ನಾವು ಕೂಡ ಮುಂದಿನ ದಿನ ಆ ಸ್ಥಾನಕ್ಕೆ ತಲುಪುತ್ತೇವೆಂಬುದು ಮರೆಯಬಾರದು. ಹೆಣ್ಣು ಎಂಬ ಬೇಧಭಾವ ಜನ್ಮಿಸುವ ಸಂದರ್ಭದಲ್ಲೂ ಜನರಲ್ಲಿ ಮೂಡುತ್ತಿರುವುದು ದೊಡ್ಡ ದುರಂತ. ಇಂದಿನ ಮಹಿಳೆಯರು ಕಿಟ್ಟಿ ಪಾರ್ಟಿಗೆ ಕೊಡುವ ಸಮಯವನ್ನು ಮಕ್ಕಳ ಉಜ್ವಲ ಭವಿಷ್ಯ ಹಾಗೂ ಸಂಸ್ಕಾರಯುತ ಶಿಕ್ಷಣ ಕೊಡಿಸಲು ಒತ್ತು ನೀಡಬೇಕೆಂದು ಹೇಳಿದರು.
ಜಿಲ್ಲಾ ಕಸಾಪ ಸಂಚಾಲಕಿ ಮುಮ್ತಾಜ್ ಬೇಗಂ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ್ ಗೌಡ, ಸಾಂಸ್ಕೃತಿಕ ಚಿಂತಕಿ ರೇಖಾ ಪ್ರೇಮ್‌ಕುಮಾರ್, ವಿವಿಧ ತಾಲೂಕಿನ ಕಸಾಪ ಅಧ್ಯಕ್ಷರಾದ ಶ್ರೀನಿಧಿ, ಭಾಗ್ಯ ನಂಜುಂಡ ಸ್ವಾಮಿ, ಸುಮಂಗಲ, ಲತಾ ರಾಜಶೇಖರ್, ಶಿವನಿ ರಂಜಿತಾ ಉಪಸ್ಥಿತರಿದ್ದರು.
