ಮೂಡಿಗೆರೆ: ಮಹಿಳೆ ಕೇವಲ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಸೀಮಿತವಾಗಿಲ್ಲ. ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ, ಉದ್ಯಮ, ಕೃಷಿ, ಆಡಳಿತ, ಸೇನೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪುರುಷರೊಂದಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಾ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾಳೆಂದು ಸಾಹಿತಿ ದೀಪ ಹಿರೆಗುತ್ತಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದ ಎಂ.ಕೆ.ಇಂದಿರಾ ವೇದಿಕೆಯಲ್ಲಿ ಏರ್ಪಡಿಸಿದ್ದ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆಯರು ಮಾಡುವ ಸಾಧನೆ ಅದು ವೈಯಕ್ತಿಕ ಗೆಲುವಲ್ಲ. ಇಡೀ ಸಮಾಜದ ಪ್ರಗತಿಯ ಸಂಕೇತವಾಗಿದೆ. ಒಬ್ಬ ಮಹಿಳೆ ಮುಂದೆ ಬಂದರೆ ಆಕೆಯೊಂದಿಗೆ ಒಂದು ಕುಟುಂಬ, ಸಮಾಜ ಮತ್ತು ಮುಂದಿನ ಪೀಳಿಗೆಯೂ ಮುಂದೆ ಬರುತ್ತದೆ. ಹಾಗಾಗಿ ಮಹಿಳೆಯರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಸೂಕ್ತ ಅವಕಾಶ, ಪ್ರೋತ್ಸಾಹ ಹಾಗೂ ಸಮಾನ ಗೌರವ ದೊರೆಯಬೇಕೆಂದರೆ ಸಾಹಿತ್ಯ ಪರಿಷತ್ತು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಅಗ್ರ ಸ್ಥಾನ ನೀಡಬೇಕೆಂದು ಹೇಳಿದರು.
ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಸಕಾರಾತ್ಮಕ ಹೆಜ್ಜೆಯಲ್ಲೂ ಕುಟುಂಬ ಹಾಗೂ ಸಮಾಜ ಬೆನ್ನೆಲುಬಾಗಿ ನಿಲ್ಲಬೇಕು. ಅಲ್ಲದೇ ಅವರ ಹಕ್ಕು, ಸ್ವಾತಂತ್ರ್ಯ, ಪ್ರತಿಭೆ ಮತ್ತು ನಿರ್ಧಾರಗಳನ್ನು ಗೌರವಿಸಿದರೆ ಮಹಿಳೆಯರು ಇನ್ನಷ್ಟು ಯಶಸ್ವಿ ಹಾದಿಯಲ್ಲಿ ನಡೆಯಲು ಸಾಧ್ಯವೆಂದ ಅವರು, ಮುಂದಿನ ದಿನ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುವ ಸಮ್ಮೇಳನಗಳಲ್ಲಿ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಬೇಕು. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮಹಿಳಾ ಲೇಖಕರು ಹುಟ್ಟುವಂತಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಜಾನಕಿ ಸುಂದ್ರೇಶ್, ಡಾ.ನಾಗಶ್ರೀ ತ್ಯಾಗರಾಜ್, ಡಾ.ನಾಗಜ್ಯೋತಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಜತೆಗೆ ಜಿಲ್ಲೆಯ ಎಲ್ಲಾ ಮಹಿಳಾ ಘಟಕದ ಅಧ್ಯಕ್ಷರಿಗೆ ಕನ್ನಡ ಸಿರಿ ಪ್ರಶಸ್ತಿ ಹಾಗೂ ಎಲ್ಲಾ ತಾಲೂಕು ಅಧ್ಯಕ್ಷರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಪಲ್ಲವಿ ಸಿ.ಟಿ.ರವಿ, ವಿವಿಧ ತಾಲೂಕಿನ ಅಧ್ಯಕ್ಷರಾದ ಜಾನಕಿ ಸುಂದ್ರೇಶ್, ಲತಾ ರಾಜಶೇಖರ್, ವಿಜಯಲಕ್ಷ್ಮಿ, ಶ್ರೀನಿಧಿ, ಸುಮಂಗಲಿ ವಿಶ್ವನಾಥ್, ಬಾಗ್ಯ ನಂಜುಂಡಸ್ವಾಮಿ, ರೇಖಾ ರವಿರಾಜ್, ಶಿವಾನಿ ರಂಜಿತ ಮತ್ತಿತರರಿದ್ದರು.
