ಬೆಂಗಳೂರು: ಅತ್ತ ಪ್ರಧಾನಿ ಮೋದಿ ಅವರೇನೂ ಹಿಂದೆಮುಂದೆ ನೋಡದೆ ತಮ್ಮ Mann Ki Baat ಖ್ಯಾತಿಯ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೀದಿಬದಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರನ್ನು ಹಾಡಿಹೊಗಳಿದರು. ಆದರೆ ಇತ್ತ, ನಿಂಗಮ್ಮಗೆ ಈಗ ಜಿಬಿಎ ಶಾಕ್ ನೀಡಿದೆ. ಜಿಬಿಎ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಆಗಮಿಸಿ ಬೀದಿಬದಿ ವ್ಯಾಪಾರ ಮಾಡಬೇಡಿ, ತಕ್ಷಣ ಹೋಟೆಲ್ ತೆರವುಗೊಳಿಸಿ ಎಂದು ಸೂಚಿಸಿದ್ದಾರೆ.
ಈ ಕಡೆ, ಖಡಕ್ ಸಚಿವರಾದ ಕೃಷ್ಣ ಬೈರೇಗೌಡರು ಸುಪ್ರೀಂಕೋರ್ಟ್ ಆರ್ಡರ್ ಕಾಪಿಯನ್ನು ಕೈಯಲ್ಲಿ ಝಳಪಿಸುತ್ತಾ ಬೀದಿ ಬದಿ ಅಂಗಡಿಗಳನ್ನು ಎಬ್ಬಿಸುತ್ತಿರುವಾಗ ಇದರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮಾಹಿತಿ ಇರಲಿಲ್ಲವಾ? ಸುಪ್ರೀಂಕೋರ್ಟ್ ಆರ್ಡರ್ ಸಮ್ಮುಖದಲ್ಲಿ ಬೀದಿ ಬದಿ ವ್ಯಾಪಾರವನ್ನು ತಾನು ಪ್ರೋತ್ಸಾಹಿಸಬಾರದು ಎಂಬ ಚಿಕ್ಕ ಮಾಹಿತಿಯೂ ಇಲ್ಲದೆ ಹೋಯಿತಾ ಪ್ರಧಾನಿಗಳಿಗೆ?
ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ನಲ್ಲಿ ಮೊಳಗಿದ ಪ್ರಶಂಸೆಯ ಮಾತುಗಳು ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಅದೇ ಸಾಧಕಿಯ ಬದುಕಿನ ಬಂಡಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬ್ರೇಕ್ ಹಾಕಲು ಮುಂದಾಗಿದೆ. ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸಣ್ಣ ಹೋಟೆಲ್ ನಡೆಸುತ್ತಿರುವ ಬೀದಿಬದಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರಿಗೆ ವ್ಯಾಪಾರ ನಿಲ್ಲಿಸಿ, ಸ್ಥಳ ತೆರವುಗೊಳಿಸುವಂತೆ ಜಿಬಿಎ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದು ಒಬ್ಬ ಮಹಿಳೆಯ ಸಂಕಷ್ಟ ಮಾತ್ರವಲ್ಲ; ಸರ್ಕಾರದ ಮಾತು ಮತ್ತು ಆಡಳಿತದ ಕೃತಿಯ ನಡುವಿನ ಕಂದಕವನ್ನು ತೋರಿಸುವ ಪ್ರಸಂಗವಾಗಿದೆ.
ಪ್ರಶಂಸೆಯ ಬೆನ್ನಲ್ಲೇ ತೆರವಿನ ಶಾಕ್:
ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯ ನೆರವು ಪಡೆದು ನಿಂಗಮ್ಮ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸುಮಾರು ಎರಡು ದಶಕಗಳಿಂದ ದುಡಿದು ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದ ಹೊಣೆ ಹೊತ್ತಿದ್ದಾರೆ. ಇಂತಹ ಮಹಿಳೆಯನ್ನು ಸ್ವಾವಲಂಬನೆಯ ಮಾದರಿ ಎಂದು ಪ್ರಧಾನಿ ದೇಶದ ಮುಂದೆ ಕೊಂಡಾಡುತ್ತಾರೆ. ಸ್ಥಳೀಯ ಅಧಿಕಾರಿಗಳು ಅವರನ್ನು ಸನ್ಮಾನಿಸುತ್ತಾರೆ. ಕೆಲವೇ ದಿನಗಳಲ್ಲಿ ಅದೇ ಆಡಳಿತ ವ್ಯವಸ್ಥೆ, “ಇಲ್ಲಿ ವ್ಯಾಪಾರ ಮಾಡಬೇಡಿ; ಹೋಟೆಲ್ ತೆರವುಗೊಳಿಸಿ” ಎನ್ನುತ್ತದೆ. ಹಾಗಾದರೆ ಯಾವುದು ನಿಜ – ವೇದಿಕೆಯ ಮೇಲಿನ ಗೌರವವೇ ಅಥವಾ ಬೀದಿಯಲ್ಲಿ ಎದುರಾಗಿರುವ ತೆರವು ಭೀತಿಯೇ?
ಪ್ರಧಾನಿಯವರು ಪ್ರತಿಯೊಂದು ಸ್ಥಳೀಯ ಆಡಳಿತ ಕ್ರಮವನ್ನೂ ತಿಳಿದಿರಬೇಕು ಎನ್ನುವುದು ಪ್ರಾಯೋಗಿಕ ನಿರೀಕ್ಷೆಯಲ್ಲ. ಆದರೆ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಒಬ್ಬ ಫಲಾನುಭವಿಯನ್ನು ಸಾಧನೆಯ ಸಂಕೇತವಾಗಿ ಪರಿಚಯಿಸುವ ಮೊದಲು, ಆಕೆಯ ವ್ಯಾಪಾರ ಕಾನೂನುಬದ್ಧವಾಗಿ ಮತ್ತು ನಿರಂತರವಾಗಿ ನಡೆಯಲು ಬೇಕಾದ ವ್ಯವಸ್ಥೆ ಇದೆಯೇ ಎಂಬ ಕನಿಷ್ಠ ಸಮನ್ವಯವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಇರಬಾರದಿತ್ತೇ? ಪ್ರಶಂಸೆ ಕೇವಲ ಪ್ರಸಾರದ ಕ್ಷಣಕ್ಕೆ ಸೀಮಿತವಾದರೆ, ಅದು ನಿಂಗಮ್ಮನ ಬದುಕಿಗೆ ರಕ್ಷಣೆಯಾಗುವುದೆಲ್ಲಿ?
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಪಾದಚಾರಿಗಳಿಗೆ ಸುರಕ್ಷಿತ ಫುಟ್‌ಪಾತ್ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳುತ್ತಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಪಾದಚಾರಿಗಳ ಜೀವ ಮತ್ತು ಸಂಚಾರದ ಹಕ್ಕನ್ನು ಯಾವುದೇ ವ್ಯಾಪಾರ ಅಡ್ಡಿಪಡಿಸಬಾರದು. ಆದರೆ ಸುಪ್ರೀಂ ಕೋರ್ಟ್‌ನ ಪಾದಚಾರಿ ಸುರಕ್ಷತೆ ಕುರಿತ ಆದೇಶವನ್ನು ಎಲ್ಲ ಬೀದಿಬದಿ ವ್ಯಾಪಾರಿಗಳನ್ನೂ ಏಕಾಏಕಿ ಹೊರಹಾಕುವ ಪರವಾನಗಿಯಂತೆ ಬಳಸಲಾಗದು. ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಮತ್ತು ವ್ಯಾಪಾರ ನಿಯಂತ್ರಣ ಕಾಯ್ದೆ–2014 ಕೂಡ ಜಾರಿಯಲ್ಲಿದೆ. ಸಮೀಕ್ಷೆ, ಟೌನ್ ವೆಂಡಿಂಗ್ ಕಮಿಟಿ, ಗುರುತಿನ ಚೀಟಿ, ನಿಗದಿತ ವ್ಯಾಪಾರ ವಲಯ ಮತ್ತು ಅಗತ್ಯವಿದ್ದರೆ ಸೂಕ್ತ ಪುನರ್ವಸತಿ—ಇವೆಲ್ಲವೂ ಆಡಳಿತದ ಹೊಣೆಗಾರಿಕೆಯ ಭಾಗ.
ನಿಂಗಮ್ಮ ಕೇಳುತ್ತಿರುವುದು ಫುಟ್‌ಪಾತ್ ಮೇಲೆ ಶಾಶ್ವತ ಹಕ್ಕನ್ನಲ್ಲ. “ಇಲ್ಲಿ ಸಾಧ್ಯವಿಲ್ಲದಿದ್ದರೆ ಪರ್ಯಾಯ ಜಾಗ ಕೊಡಿ; ಅಲ್ಲಿಗೆ ಹೋಗಿ ವ್ಯಾಪಾರ ಮಾಡುತ್ತೇನೆ” ಎಂಬುದು ಅವರ ಮನವಿ. ಇದು ಅಸಮಂಜಸ ಬೇಡಿಕೆಯಲ್ಲ. ತೆರವು ಮಾಡುವ ಅಧಿಕಾರ ಇರುವ ಸರ್ಕಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ಇದೆ. ಕಾನೂನು ಎಂದರೆ ಬಡವರ ಗಾಡಿಯನ್ನು ಮಾತ್ರ ತಳ್ಳಿಹಾಕುವುದಲ್ಲ; ಅವರ ಬದುಕು ಬೀದಿಗೆ ಬೀಳದಂತೆ ನ್ಯಾಯಸಮ್ಮತ ದಾರಿ ತೋರಿಸುವುದೂ ಹೌದು.
ಜೀವನೋಪಾಯ ಕಸಿದುಕೊಂಡ ಪ್ರಧಾನಿ ಮೋದಿಯ ‘ಮನ್ ಕಿ ಬಾತ್’ ಪ್ರಶಂಸೆ?
ಒಂದು ಕಡೆ ಸ್ವನಿಧಿ ಯೋಜನೆಯ ಯಶಸ್ಸನ್ನು ಸಾರುವುದು, ಮತ್ತೊಂದು ಕಡೆ ಅದೇ ಫಲಾನುಭವಿಯ ಬದುಕಿನ ಮೂಲವನ್ನು ಕಿತ್ತುಕೊಳ್ಳುವುದು ಯಾವುದೇ ಆಡಳಿತದ ವಿರೋಧಾಭಾಸವೇ ಸರಿ. ಪ್ರಧಾನಿ ಕೊಂಡಾಡಿದ ನಿಂಗಮ್ಮಗೆ ವಿಶೇಷ ವಿನಾಯಿತಿ ಬೇಕಿಲ್ಲ; ಆದರೆ ಕಾನೂನುಬದ್ಧ ಪರಿಶೀಲನೆ, ಪೂರ್ವಸೂಚನೆ ಮತ್ತು ಪರ್ಯಾಯ ಸ್ಥಳ ಬೇಕು. ಇಲ್ಲದಿದ್ದರೆ ‘ಮನ್ ಕಿ ಬಾತ್’ನಲ್ಲಿ ಕೇಳಿದ ಆತ್ಮನಿರ್ಭರತೆಯ ಕಥೆ, ಬೆಂಗಳೂರಿನ ಫುಟ್‌ಪಾತ್‌ನಲ್ಲಿ ‘ಮನದ ನೋವಿನ ಮಾತು’ ಆಗಿ ಉಳಿಯುತ್ತದೆ.
ಮನ್ ಕಿ ಬಾತ್‌ನಲ್ಲಿ ಪ್ರಧಾನಿಯಿಂದ ಮೆಚ್ಚುಗೆ ಪಡೆದಿದ್ದ ಸಣ್ಣ ವ್ಯಾಪಾರಿಗೆ ಇದೀಗ ಎದುರಾಗಿರುವ ಈ ಸಮಸ್ಯೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೋದಿ ಮನ್ ಕಿ ಬಾತ್ ನಿಂಗಮ್ಮ
ಹೋಟೆಲ್ ನಿಂಗಮ್ಮ ಬೆಂಗಳೂರು
ಜಿಬಿಎ ಬೀದಿಬದಿ ವ್ಯಾಪಾರಿಗಳ ತೆರವು
ಕೃಷ್ಣ ಬೈರೇಗೌಡ ಫುಟ್‌ಪಾತ್ ತೆರವು
ಪಿಎಂ ಸ್ವನಿಧಿ ಯೋಜನೆ
ಬೆಂಗಳೂರು ಬೀದಿಬದಿ ವ್ಯಾಪಾರಿಗಳು
ಸುಪ್ರೀಂ ಕೋರ್ಟ್ ಫುಟ್‌ಪಾತ್ ಆದೇಶ
