Monday, September 7, 2026
Homeಕ್ರೈಮ್Mudigere: ಮಹಿಳೆಯ ಮುಖಕ್ಕೆ ಖಾರದ ಪುಡಿ ಎರಚಿ ಮಾಂಗಲ್ಯ ಚೈನ್‌ ಎಗರಿಸಿ ಕಳ್ಳ ಪರಾರಿ!

Mudigere: ಮಹಿಳೆಯ ಮುಖಕ್ಕೆ ಖಾರದ ಪುಡಿ ಎರಚಿ ಮಾಂಗಲ್ಯ ಚೈನ್‌ ಎಗರಿಸಿ ಕಳ್ಳ ಪರಾರಿ!

Telegram Group
Join Now

ಮೂಡಿಗೆರೆ: ಮಹಿಳೆಯ ಮುಖಕ್ಕೆ ಖಾರದ ಪುಡಿ ಎರಚಿ, ಕುತ್ತಿಗೆಗೆ ಕೈ ಹಾಕಿ 24 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೂಡಿಗೆರೆ ಪಟ್ಟಣದ ಕುರ್ಕಮಕ್ಕಿ ವಾರ್ಡ್‌ನಲ್ಲಿ ಸೆ.5ರಂದು ನಡೆದಿದೆ.

ಕುರ್ಕಮಕ್ಕಿಯ ದಾಕ್ಷಾಯಿಣಿ (58) ಎಂಬುವರು ದೂರು ನೀಡಿದ್ದು, ಉತ್ತರ ಪ್ರದೇಶದಿಂದ ಕೆಲಸಕ್ಕಾಗಿ ಬಂದಿದ್ದ ಸಂಜೀತ್ ಎಂಬಾತನಿಗೆ ನಾಲ್ಕು ತಿಂಗಳ ಹಿಂದೆ ತಮ್ಮ ಮನೆಯನ್ನು ಬಾಡಿಗೆಗೆ ನೀಡಿದ್ದರು. ಮಂಜುನಾಥ ಗಂಗನಮಕ್ಕಿ ಅವರ ಮೂಲಕ ಮನೆ ಬಾಡಿಗೆಗೆ ನೀಡಲಾಗಿದ್ದು, ತಿಂಗಳಿಗೆ ₹2,200 ಬಾಡಿಗೆ ನಿಗದಿಪಡಿಸಲಾಗಿತ್ತು.

ಸೆ.5ರಂದು ಬೆಳಿಗ್ಗೆ ಸುಮಾರು 11.15ಕ್ಕೆ ಸಂಜೀತ್ ದಾಕ್ಷಾಯಿಣಿ ಅವರ ಮನೆಗೆ ಬಂದು, ತಾನು ಮನೆ ಖಾಲಿ ಮಾಡಿಕೊಂಡು ಊರಿಗೆ ತೆರಳುತ್ತಿರುವುದಾಗಿ ಹಿಂದಿ ಭಾಷೆಯಲ್ಲಿ ತಿಳಿಸಿದ್ದಾನೆ. ಬಳಿಕ ಬಾಡಿಗೆಗೆ ನೀಡಿದ್ದ ಮನೆಗೆ ಕರೆದುಕೊಂಡು ಹೋಗಿ, ಪ್ಲೇಟ್‌ನಲ್ಲಿ ಖಾರದ ಪುಡಿ ತೋರಿಸಿ ಅದು ಚೆನ್ನಾಗಿಲ್ಲ ಎಂದು ಹೇಳಿದ್ದಾನೆ. ನಂತರ ಅಲ್ಲಿದ್ದ ಅಕ್ಕಿಯನ್ನು ತೋರಿಸಿ ಮಾತನಾಡುತ್ತಿದ್ದ ವೇಳೆ, ಬೆಳಿಗ್ಗೆ 11.35ರ ಸುಮಾರಿಗೆ ದಾಕ್ಷಾಯಿಣಿ ಅವರ ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ ಎನ್ನಲಾಗಿದೆ.

ಖಾರದ ಪುಡಿ ಕಣ್ಣಿಗೆ ಬಿದ್ದ ಹಿನ್ನೆಲೆಯಲ್ಲಿ ದಾಕ್ಷಾಯಿಣಿ ಕೂಗಿಕೊಂಡು ಆರೋಪಿಯನ್ನು ತಳ್ಳಿ ಹೊರಗೆ ಬರಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ದಾಕ್ಷಾಯಿಣಿ ಪಕ್ಕದ ಬಾಡಿಗೆ ಮನೆಯತ್ತ ತೆರಳುತ್ತಿದ್ದಾಗ, ಅವರ ಹಿಂದೆ ಬಂದ ಆರೋಪಿ ಮತ್ತೆ ಕುತ್ತಿಗೆಗೆ ಕೈ ಹಾಕಿ 24 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕಳವಾಗಿರುವ 24 ಗ್ರಾಂ ಬಂಗಾರದ ಮಾಂಗಲ್ಯ ಸರದ ಮೌಲ್ಯ ಸುಮಾರು ₹2.40 ಲಕ್ಷ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದಾಕ್ಷಾಯಿಣಿ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!