ಬಾಳೆಹೊನ್ನೂರು: ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಮತ್ತು ಪರಿಸರ ಸೂಕ್ಷ್ಮ ವಲಯ (ESA) ಘೋಷಣೆಯನ್ನು ಕೈಬಿಡುವಂತೆ ಒತ್ತಾಯಿಸಿ ಸೆ.10ರಂದು ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣ ಸಂಪೂರ್ಣವಾಗಿ ಬಂದ್‌ಗೆ ರೈತ ಮತ್ತು ಸಾರ್ವಜನಿಕ ಹೋರಾಟ ಸಮಿತಿ ಕರೆ ನೀಡಿದೆ
ಬಂದ್ ಅಂಗವಾಗಿ ಪಟ್ಟಣದ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಲಾಗಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ. ಇದೇ ಸಂದರ್ಭದಲ್ಲಿ ಪಾದಯಾತ್ರೆ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ.

ಸೆ.10ರಂದು ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ಹೊರಟು, ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ರದಿ ಜಾರಿಯಾದರೆ ಮಲೆನಾಡಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮಲೆನಾಡಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯವನ್ನು ಕೈಬಿಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಒತ್ತಾಯ ಹೇರಲು ನಿರ್ಧರಿಸಲಾಯಿತು.
ಬಾಳೆಹೊನ್ನೂರು ಬಂದ್‌ಗೆ ಖಾಂಡ್ಯ, ಬಾಳೆಹೊನ್ನೂರು ಹಾಗೂ ಮೇಗುಂದಾ ಹೋಬಳಿ ರೈತರು, ವಿವಿಧ ಪಕ್ಷಗಳ ಮುಖಂಡರು ಸಹ ಬೆಂಬಲ ಸೂಚಿಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬಂದ್
ಪಶ್ಚಿಮ ಘಟ್ಟದ ಅರಣ್ಯ, ಜೀವವೈವಿಧ್ಯ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶ ಹೊಂದಿರುವ ಅಧಿಸೂಚನೆಯಿಂದ ಮಲೆನಾಡಿನ ರೈತರು, ಕಾಫಿ ಬೆಳೆಗಾರರು, ತೋಟಗಾರರು ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿ ಆತಂಕ ವ್ಯಕ್ತಪಡಿಸಿದೆ.
