ಬಾಳೆಹೊನ್ನೂರು: ಅವೈಜ್ಞಾನಿಕ ಮತ್ತು ಮಲೆನಾಡಿಗೆ ಮರಣ ಶಾಸನವಾಗುತ್ತಿರುವ ಕಸ್ತೂರಿ ರಂಗನ್ ವರದಿಯ ಯತಾವತ್ ಅನುಷ್ಠಾನ ವಿರೋಧಿಸಿ ಸೆಪ್ಟೆಂಬರ್ 10ರಂದು ನೆಡೆಯಲಿರುವ ಪಕ್ಷಾತೀತವಾದ ಬಾಳೆಹೊನ್ನೂರು ಬಂದ್ ಮತ್ತು ಬೃಹತ್ ಸಮಾವೇಶಕ್ಕೆ ರಂಭಾಪುರಿ ಶ್ರೀಗಳ ಬೆಂಬಲ ದೊರೆತಿದ್ದು, ಪ್ರತಿಭಟನೆ ಮತ್ತಷ್ಟು ತೀವ್ರತೆಯನ್ನು ಪಡೆಯುತ್ತಿದೆ.
ಕಸ್ತೂರಿ ರಂಗನ್ ವರದಿ ಅನುಷ್ಠಾನ ಪ್ರಹಾರದಿಂದ ಮಲೆನಾಡಿನ ನೆಲವಾಸಿಗಳ ಬದುಕನ್ನು ಉಳಿಸಿ ಎಂಬ ಕೂಗಿನ ಧ್ವನಿ ಈಗ ಮತ್ತಷ್ಟು ಗಟ್ಟಿಯಾಗುತ್ತಿದೆ.
ಸೆ.10ರಂದು ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ಹೊರಟು, ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ರದಿ ಜಾರಿಯಾದರೆ ಮಲೆನಾಡಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಮಲೆನಾಡಿಗೆ ಮಾರಕವಾದ ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯವನ್ನು ಕೈಬಿಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಒತ್ತಾಯ ಹೇರಲು ನಿರ್ಧರಿಸಲಾಯಿತು.

ಬಾಳೆಹೊನ್ನೂರು ಬಂದ್ಗೆ ಖಾಂಡ್ಯ, ಬಾಳೆಹೊನ್ನೂರು ಹಾಗೂ ಮೇಗುಂದಾ ಹೋಬಳಿ ರೈತರು, ವಿವಿಧ ಪಕ್ಷಗಳ ಮುಖಂಡರು ಸಹ ಬೆಂಬಲ ಸೂಚಿಸಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಬಂದ್ ಎನ್ನಲಾಗಿದೆ.
