ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸದ ಮೇಲೆ ಇ.ಡಿ ದಾಳಿ ನಡೆಸಿದೆ.
ಬೆಂಗಳೂರು, ಬೆಳಗಾವಿ, ಮಹಾರಾಷ್ಟ್ರ ಸೇರಿದಂತೆ 15 ಕಡೆ ದಾಳಿ ನಡೆದಿದೆ. ಮಂಜುನಾಥ್ ಅಬಕಾರಿ ಅಕ್ರಮದ ಮೇಲೆ ಈ ಹಿಂದೆ ಇ.ಡಿ ದಾಳಿ ಮಾಡಿತ್ತು. 18 ಅನಧಿಕೃತ ಲೈಸೆನ್ಸ್ ಕೊಡುವುದಕ್ಕೆ ಸತೀಶ್ ಜಾರಕಿಹೊಳಿ ಸಹಾಯ ಮಾಡಿದ್ದರೆಂಬ ಆರೋಪ ಇದೆ
ವಿದೇಶದಲ್ಲಿ ಹಣ ಹೂಡಿಕೆಗೆ ಜಾರಕಿಹೊಳಿ ಸಹಾಯ ಮಾಡಿದ್ದ ಆರೋಪವಿದೆ. 3 ಕೋಟಿಯಷ್ಟು ಅಕ್ರಮ ವಿದೇಶಿ ಹಣ ಪತ್ತೆಯಾಗಿತ್ತು. ಸಚಿವರಾಗಿದ್ದಾಗ ಪ್ರಭಾವ ಬಳಸಿ 18 ಬಾರ್ ಲೈಸೆನ್ಸ್ ನೀಡಿದ್ದರು ಎನ್ನಲಾಗಿದೆ. ಬಾರ್‌ನಿಂದ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆ ಈಗ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ನಿಯಮಗಳನ್ನು ಗಾಳಿಗೆ ತೂರಿ ಸತೀಶ್ ಜಾರಕಿಹೊಳಿ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸತೀಶ್ ಜಾರಕಿಹೊಳಿ ಆಫ್ರಿಕಾದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ವ್ಯವಹಾರದಲ್ಲಿ ಭಾರಿ ಮೊತ್ತದ ಹಣ ಹೂಡಿಕೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆಫ್ರಿಕಾದಲ್ಲಿ ಅಸ್ತಿತ್ವದಲ್ಲಿರುವ ಈ ಗಣಿಗಾರಿಕೆ ಕಂಪನಿಗೆ ಪುತ್ರ ರಾಹುಲ್ ಜಾರಕಿಹೊಳಿ ನಿರ್ದೇಶಕರಾಗಿದ್ದು, ಸತೀಶ್ ಜಾರಕಿಹೊಳಿ ಅವರ ಸಹೋದರಿ ಲಕ್ಷ್ಮಿ ಕೂಡ ನಿರ್ದೇಶಕಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
