ಬೆಂಗಳೂರು: ಪಶ್ಚಿಮಘಟ್ಟದ ಸಂಪೂರ್ಣ ಪ್ರದೇಶವನ್ನು ಒಂದೇ ನಿಯಮದಡಿ ತರುವ ಬದಲು, ದಟ್ಟ ಅರಣ್ಯ ಪ್ರದೇಶಗಳಿಗೆ ಮಾತ್ರ ಕಠಿಣ ಪರಿಸರ ಸಂರಕ್ಷಣಾ ಕ್ರಮಗಳನ್ನು ರೂಪಿಸಬೇಕು. ಈ ಕುರಿತು ರಾಜ್ಯ ಸರ್ಕಾರವೇ ತಜ್ಞರ ಸಮಿತಿ ರಚಿಸಿ ಸಮಗ್ರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದರು.
ವಿಧಾನಮಂಡಲ ಅಧಿವೇಶನದಲ್ಲಿ ಪಶ್ಚಿಮಘಟ್ಟ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದ ಅವರು, ಪರಿಸರವಾದಿಗಳ ಹೋರಾಟದ ಹಿನ್ನೆಲೆಯಲ್ಲಿ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳು ರೂಪುಗೊಂಡಿವೆ. ಗುಜರಾತ್‌ನಿಂದ ಕೇರಳದವರೆಗೆ ಪಶ್ಚಿಮಘಟ್ಟ ವ್ಯಾಪಿಸಿದ್ದು, ವರದಿಗಳ ಪರಿಣಾಮ ಈ ವ್ಯಾಪ್ತಿಯ ಎಲ್ಲ ರಾಜ್ಯಗಳ ಮೇಲೂ ಆಗಲಿದೆ ಎಂದರು.
ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಹಲವು ಗ್ರಾಮಗಳಿಗೆ ವರದಿಯಿಂದ ಆತಂಕ ಎದುರಾಗಿದೆ. ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಯ ಜತೆಗೆ ಅಲ್ಲಿನ ಜನರ ಬದುಕು ಹಾಗೂ ಜೀವನೋಪಾಯವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
