ಕಳಸ : ತಾಲೂಕಿನ ಸಂಸೆ ಸಮೀಪದ ಕಟ್ನೀರ್ ಗ್ರಾಮದಲ್ಲಿ ಬರೋಬ್ಬರಿ 18 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು.
ಕಳೆದ ಹಲವು ದಿನಗಳಿಂದ ಗ್ರಾಮದ ಸುತ್ತಮುತ್ತಲೇ ಈ ದೈತ್ಯ ಸರ್ಪ ನಿರಂತರವಾಗಿ ಓಡಾಡಿಕೊಂಡಿದ್ದರಿಂದ ಸ್ಥಳೀಯ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ತೋಟದ ಕೆಲಸಗಳಿಗೆ ಹೋಗಲು ಭಯಪಟ್ಟು ತೀವ್ರ ಪರದಾಟ ಅನುಭವಿಸುವಂತಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಉರಗ ತಜ್ಞ ಸ್ನೇಕ್ ರಿಜ್ವಾನ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಜಂಟಿ ಕಾರ್ಯಾಚರಣೆ ನಡೆಸಿ ಈ ಬೃಹತ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹಾವನ್ನು ರಕ್ಷಿಸಿದ ಬಳಿಕ, ಅದನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ದಟ್ಟ ಅರಣ್ಯ ಪ್ರದೇಶಕ್ಕೆ ಯಶಸ್ವಿಯಾಗಿ ಬಿಡಲಾಯಿತು.
ದಿನನಿತ್ಯ ನಡುಕ ಹುಟ್ಟಿಸಿದ್ದ ಕಾಳಿಂಗ ಸರ್ಪ ಸುರಕ್ಷಿತವಾಗಿ ಸೆರೆಯಾಗುತ್ತಿದ್ದಂತೆ, ಗ್ರಾಮಸ್ಥರು ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
