ಹಾಸನ: ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ವೇಳೆ ಹಾಸನದಲ್ಲಿ ಅನುಮತಿ ನೀಡದಿದ್ದರು ಡಿಜೆ ಬಳಸಿದ ಕಾರಣ ಹದಿನೈದು ಜನರ ಮೇಲೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿರುವ ಪೊಲೀಸರ ವಿರುದ್ಧ ವಿಹೆಚ್‌ಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಹಾಸನ ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸೆಪ್ಟೆಂಬರ್ 23ರಂದು ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಅನುಮತಿ ಇಲ್ಲದಿದ್ದರೂ ನಾಲ್ಕು ಡಿಜೆಗಳನ್ನು ಬಳಸಲಾಗಿತ್ತು.
ಇದರಿಂದ ತೀವ್ರ ಶಬ್ದ ಮಾಲಿನ್ಯ ಉಂಟಾಗಿ, ಸಾರ್ವಜನಿಕರಿಗೆ ಮಾನಸಿಕ ಕಿರಿಕಿರಿ ಉಂಟುಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹಾಸನದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮಹಿಪಾಲ್, ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ನಾವು ಕೂಡ ನೋಡಿದ್ದೇವೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಕಾರ್ಯಕ್ರಮಗಳು ನಡೆದಾಗ ಅಲ್ಲಿಗೆ ಪರಿಸರ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಡೆಸಿಬಲ್ ಚೆಕ್ ಮಾಡಿಸುವ ತಾಕತ್ ಅನ್ನು ಪೊಲೀಸರು ಪ್ರದರ್ಶಿಸಬೇಕು. ಅಲ್ಲಿ ಎಫ್‌ಐಆರ್ ದಾಖಲು ಮಾಡ್ತಾರಾ? ಐಪಿಎಲ್ ಆಯೋಜಕರು 124 ಡೆಸಿಬಲ್ ರೀಚ್ ಆಯ್ತು ಅಂಥ ಆಯೋಜಕರು ತೋರಿಸುತ್ತಾರೆ. ಅವರ ಮೇಲೆ ಕೇಸ್ ದಾಖಲು ಮಾಡ್ತಾರಾ ಎಂದು ಪ್ರಶ್ನಿಸಿದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾನಂದ, ಅಭಿಷೇಕ್, ವಿಕ್ಕಿ, ಲೋಕಿ, ದಿನೇಶ್‌ಸಿಂಗ್, ಅನುಪ, ವಿಕಾಸ್, ಶರತ್, ಮಂಜು, ಚಂದನ್, ಮಹಿಪಾಲ್, ನವೀನ್, ಚರಣ್, ಮಧು ಹಾಗೂ ಪವನ್ ಸೇರಿದಂತೆ ಒಟ್ಟು 15 ಜನರ ವಿರುದ್ಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರ ಪೈಕಿ ದಯಾನಂದ, ಅಭಿಷೇಕ್, ವಿಕ್ಕಿ, ಲೋಕಿ, ದಿನೇಶ್‌ಸಿಂಗ್, ಅನುಪ, ವಿಕಾಸ್, ಶರತ್, ಮಂಜು, ಚಂದನ್ ಹಾಗೂ ಮಹಿಪಾಲ್ ಅವರ ವಿರುದ್ಧ ನಾಲ್ಕೂ ಪ್ರಕರಣಗಳು ದಾಖಲಾಗಿವೆ.
