ಮೂಡಿಗೆರೆ : ಜಿಲ್ಲೆಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾ ಪ್ರಜೆಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮುಂದಿನ ದಿನದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲಾಡಳಿತ ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸುಧೀರ್ ಕಡಿದಾಳ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಬಾಂಗ್ಲ ವಲಸಿಗರು ಕಾಫಿ ತೋಟಗಳಲ್ಲಿ ನೆಲಸಿದ್ದಾರೆ ಇದು ಭವ್ಯ ಭಾರತಕ್ಕೆ ಕಂಟಕ ಅವರಿಗೆ ಈ ದೇಶದ ಕಾನೂನು ಬಗ್ಗೆ ಅರಿವಿಲ್ಲ. ಏನು ಬೇಕಾದರೂ ಮಾಡಬಹುದೆಂಬ ಮನೋಭಾವ ಹೊಂದಿರುವಂತೆ ಕಾಣುತ್ತಿದೆ. ಇದರಿಂದಲೇ ಈ ಹಿಂದೆ ಮೂಡಿಗೆರೆಯಲ್ಲಿ ನಡೆಯುವ ವಾರದ ಸಂತೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಿ, ಸಿಕ್ಕಿಹಾಕೊಂಡಿರುವ ಘಟನೆಯೇ ಸಾಕ್ಷಿಯಾಗಿದೆ. ಕೆಲವರು ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡು ತೋಟದ ಮಾಲೀಕರ ಮೇಲೆಯೇ ದಬ್ಬಾಳಿಕೆ ನಡೆಸಲಾರಂಭಿಸಿದ್ದು, ಅವರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗತೊಡಗಿದೆ ಎಂದು ದೂರಿದ್ದಾರೆ.
ಎಸ್ಐಆರ್ ಪ್ರಕ್ರಿಯೆ ನಡೆಸುವಾಗ ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ ಸುಮಾರು 2300ಕ್ಕೂ ಅಧಿಕ ಮಂದಿ ಬಾಂಗ್ಲ ವಲಸಿಗರಿಗೆ ಮತದಾನದ ಹಕ್ಕು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಬೇಕಾಗಿದ್ದು, ಇಲ್ಲಿ ನೆಲೆಸಿರುವವರ ದಾಖಲೆಗಳು, ಗುರುತಿನ ಚೀಟಿ, ವಾಸಸ್ಥಳ ಹಾಗೂ ಉದ್ಯೋಗದ ವಿವರಗಳನ್ನು ಪರಿಶೀಲಿಸಬೇಕು. ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ಪತ್ತೆಯಾದಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರದ ವಲಸೆ ಮತ್ತು ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ಕಾನೂನುಗಳ ಪ್ರಕಾರ ಮುಂದಿನ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಸಂಘಟನೆಯಿಂದ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
