ಮೂಡಿಗೆರೆ: ತಾಲೂಕು ಸಂಯುಕ್ತ ಜಮಾತ್ ಒಕ್ಕೂಟದ ಮಹಾಸಭೆಯು ಮಂಗಳವಾರ ಕೊಟ್ಟಿಗೆಹಾರದ ಬದ್ರಿಯಾ ಜುಮ್ಮಾ ಮಸೀದಿ ಆವರಣದಲ್ಲಿ ಒಕ್ಕೂಟದ ಅಧ್ಯಕ್ಷ ಸಿ.ಕೆ. ಇಬ್ರಾಹಿಂ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕಿನ ವ್ಯಾಪ್ತಿಯಲ್ಲಿ ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಚಿಕಿತ್ಸಾ ನೆರವು ನೀಡುವುದು, ಕೈಕಾಲು ಮುರಿತಕ್ಕೊಳಗಾಗಿ ಸಂಕಷ್ಟದಲ್ಲಿರುವವರಿಗೆ ವೀಲ್ಚೇರ್ ಹಾಗೂ ಅಗತ್ಯವಿರುವವರಿಗೆ ಸೈಕಲ್ ವ್ಯವಸ್ಥೆ ಕಲ್ಪಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸಿ.ಕೆ. ಇಬ್ರಾಹಿಂ ಹಾಜಿ ಅವರು, ಸಮಾಜದ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಹಾಗೂ ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಸಂಘಟನೆಯ ಪ್ರಮುಖ ಸಾಮಾಜಿಕ ಜವಾಬ್ದಾರಿಯಾಗಿದೆ. ಆರ್ಥಿಕ ಸಂಕಷ್ಟದಿಂದ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದ ರೋಗಿಗಳಿಗೆ ನೆರವು ನೀಡುವುದು, ಅಪಘಾತದಿಂದ ದೈಹಿಕ ತೊಂದರೆಗೊಳಗಾದವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಒಕ್ಕೂಟವು ಗಮನಹರಿಸಬೇಕಿದೆ ಎಂದು ತಿಳಿಸಿದರು.
ತಾಲೂಕಿನ ವಿವಿಧ ಜಮಾತ್ಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ನೆರವಿನ ಅಗತ್ಯವಿರುವ ಅರ್ಹ ಫಲಾನುಭವಿಗಳನ್ನು ಗುರುತಿಸುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ಜಮಾತ್ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಒಕ್ಕೂಟದ ಕಾರ್ಯದರ್ಶಿ ಮೊಹಮ್ಮದ್ ಆಲಿ ಹಾಜಿ ಮಾತನಾಡಿ, ಸಮಾಜದ ಬಡವರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಆರ್ಥಿಕ ತೊಂದರೆಯಿಂದ ಶಿಕ್ಷಣ ಮುಂದುವರಿಸಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವುದು ಮಹತ್ವದ ಕಾರ್ಯವಾಗಿದೆ. ಜಮಾತ್ಗಳ ಸಹಕಾರದೊಂದಿಗೆ ಅರ್ಹರನ್ನು ಗುರುತಿಸಿ ಅವರಿಗೆ ಅಗತ್ಯ ನೆರವು ತಲುಪಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಅಕ್ರಮ್ ಹಾಜಿ, ಕೊಟ್ಟಿಗೆಹಾರ ಜಮಾತ್ ಅಧ್ಯಕ್ಷ ಮುನೀರ್ ಹಾಜಿ, ಕಾರ್ಯದರ್ಶಿ ಹಸನ್ ಹಾಜಿ, ಉಪಾಧ್ಯಕ್ಷರಾದ ಮೊಹಮ್ಮದ್ ಹಾಜಿ ಹಿರೇಬೈಲ್, ಎಂ. ಮಜೀದ್, ಎ.ಎಂ. ಶರೀಫ್ (ಮೂಡಿಗೆರೆ), ಮೊಹಮ್ಮದ್ ಆಲಿ, ಎಂ.ಎಸ್. ಲತೀಫ್ (ಬಿಳಗುಳ), ಎಂ.ಎಚ್. ಇಬ್ರಾಹಿಂ, ಆಯೂಬ್ ಹಾಜಿ, ಖಜಾಂಚಿ ಅಬ್ದುಲ್ಲ ಹಾಜಿ ಕೌಸರ್, ಪ್ರಧಾನ ಕಾರ್ಯದರ್ಶಿ ಜೆಬಿ ಮೊಹಮ್ಮದ್ ಆಲಿ ಹಾಜಿ, ಸಹ ಕಾರ್ಯದರ್ಶಿಅಸ್ಗರ್ಚಕ್ ಮಕ್ಕಿ ,ಮೊಹಮ್ಮದ್ ಅಶ್ರಫ್, ಮೊಹಿದ್ದಿನ್ ಸೇಠ್, ರಿಜ್ವಾನ್ ಆಲಿ ಸೇರಿದಂತೆ ಸಲಹಾ ಸಮಿತಿ ಸದಸ್ಯರು, ವಿವಿಧ ಜಮಾತ್ಗಳ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
