ಚಿಕ್ಕಮಗಳೂರು: ದೇಶದ ಕೆಲ ಭಾಗಗಳಲ್ಲಿ ಈ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದರೂ, ಕರ್ನಾಟಕದ ಮಲೆನಾಡು ಜಿಲ್ಲೆಯೇ ಇದರ ಕೇಂದ್ರ ಬಿಂದುವಾಗಿದೆ.
ಹೌದು .. ಈ ಬಾರಿ ಮಳೆ ಕೊರತೆಯಿಂದ ಬಿಸಿಲಿನ ವಾತಾವರಣ ಹೆಚ್ಚಾಗಿದ್ದು ಮಂಗನ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ತೀವ್ರ ಕಟ್ಟೆಚ್ಚರದಿಂದಿರಬೇಕೆಂದು ಕೊಪ್ಪ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಹಾಗೆ ಬೇಸಿಗೆಯ ಆರಂಭ ಹಾಗೂ ತಾಪಮಾನ ಏರಿಕೆಯು ಈ ರೋಗವನ್ನು ಹರಡುವ ಉಣ್ಣೆಗಳ ಸಂತಾನೋತ್ಪತ್ತಿಗೆ ಮತ್ತು ಅವುಗಳ ಸಕ್ರಿಯತೆಗೆ ಹೆಚ್ಚು ಪೂರಕ ವಾತಾವರಣವನ್ನು ನಿರ್ಮಿಸುತ್ತದೆ. ಮಂಗನ ಕಾಯಿಲೆಯು ಕ್ಯಾಸನೂರು ಫಾರೆಸ್ಟ್ ಡಿಸೀಸ್ ವೈರಸ್ ನಿಂದ ಬರುತ್ತದೆ. ಕಾಡಿನಲ್ಲಿರುವ ಸೋಂಕಿತ ಮಂಗಗಳು ಸತ್ತಾಗ, ಅವುಗಳ ದೇಹದ ಮೇಲಿರುವ ಉಣ್ಣೆಗಳು ನೆಲಕ್ಕೆ ಉದರುತ್ತವೆ. ಬಿಸಿಲು ಹೆಚ್ಚಾದಾಗ ಮತ್ತು ವಾತಾವರಣ ಒಣಗಿದಾಗ ಈ ಉಣ್ಣೆಗಳು ತಮಗಾಗಿ ಆಹಾರ (ರಕ್ತ) ಹುಡುಕುತ್ತಾ ಕಾಡಿಗೆ ಹೋಗುವ ಮನುಷ್ಯರು ಮತ್ತು ಜಾನುವಾರುಗಳನ್ನು ಸುಲಭವಾಗಿ ಕಚ್ಚುತ್ತವೆ ಎಂದು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಜ್ವರ ಬಂದರೆ ನಿರ್ಲಕ್ಷಿಸದೇ ತಕ್ಷಣ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೆ ರೋಗ ನಿಯಂತ್ರಣಕ್ಕಾಗಿ ಈಗಾಗಲೇ ಗ್ರಾಮೀಣ ಭಾಗದಲ್ಲೇ ಮನೆ ಮನೆ ಜ್ವರ ಸಮೀಕ್ಷೆ ಹಾಗೂ ಜಾಗೃತಿ ಅಭಿಯಾನ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ತಿಳಿಸಿದರು.
