ಚಿಕ್ಕಮಗಳೂರು: ಜಿಲ್ಲೆಯ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ಶ್ರೀ ದೇವಿರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ನವೆಂಬರ್ 7 ರಿಂದ 11ರವರೆಗೆ ನಡೆಯಲಿದ್ದು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಶ್ರೀ ದೇವಿರಮ್ಮ ದೇವಾಲಯದ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವದ ಕುರಿತು ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಶ್ರೀ ದೇವಿರಮ್ಮನವರ ದೇವಾಲಯದ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗಾಗಿ ಸ್ಥಳವನ್ನು ಗುರುತಿಸಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಬೆಟ್ಟಕ್ಕೆ ನಾಲ್ಕು ದಿಕ್ಕುಗಳಿಂದ ಹತ್ತುವುದರಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು, ಯಾತ್ರಾರ್ಥಿಗಳು ಆಗಮಿಸುವುದರಿಂದ ಭಕ್ತಾದಿಗಳಿಗೆ ಆರೋಗ್ಯ ಸೇವೆ ಒದಗಿಸಲು ಬೆಟ್ಟದ ಮೇಲೆ, ಬೆಟ್ಟದ ಮಧ್ಯಭಾಗ, ಫಲಾಹಾರ ಕಲ್ಲು, ಐ.ಡಿ.ಪೀಠ (ಮಾಣಿಕ್ಯಧಾರ) ಹಾಗೂ ದೇವಾಲಯದ ಕೆಳಭಾಗದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ವೈದ್ಯಕೀಯ ಪರಿಕರಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ತುರ್ತು ಆರೋಗ್ಯ ಸೇವೆ ಒದಗಿಸಬೇಕು. ಮೂರು ಸುಸಜ್ಜಿತ ಆಂಬ್ಯುಲೆನ್ಸ್ ವಾಹನಗಳನ್ನು ಸ್ಥಳದಲ್ಲಿ ಇರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಜಾತ್ರೆ ಪ್ರಾರಂಭದಿಂದ ಮುಗಿಯುವವರೆಗೆ ವಿಶೇಷ ಬಸ್ಗಳನ್ನು ಒದಗಿಸಬೇಕು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ಥಿಪಡಿಸಬೇಕು, ದೇವಾಲಯಕ್ಕೆ ಹೋಗುವ ರಸ್ತೆ ಮಾರ್ಗದ ಇಕ್ಕೆಲಗಳಲ್ಲಿ ಹೊರಚಾಚಿರುವ ಜಂಗಲ್ ಕ್ಲಿಯರ್ ಹಾಗೂ ಪಾರ್ಕಿಂಗ್, ಇತರೆ ಕಡೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯುವಂತೆ ಸೂಚಿಸಿದರು.
