Friday, October 23, 2026
Homeಜಿಲ್ಲಾಸುದ್ದಿಕರಡು ಮೀಸಲಾತಿ ಪಟ್ಟಿಯಲ್ಲಿ ಬಿಸಿಎಂ(ಎ)ಗೆ ಅನ್ಯಾಯದ ಆರೋಪ: ಜಿಪಂ, ತಾಪಂ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲು ಮಲೆನಾಡು...

ಕರಡು ಮೀಸಲಾತಿ ಪಟ್ಟಿಯಲ್ಲಿ ಬಿಸಿಎಂ(ಎ)ಗೆ ಅನ್ಯಾಯದ ಆರೋಪ: ಜಿಪಂ, ತಾಪಂ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲು ಮಲೆನಾಡು ಮುಸ್ಲಿಂ ವೇದಿಕೆ ಆಗ್ರಹ

Telegram Group
Join Now

ಮೂಡಿಗೆರೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕರಡು ಮೀಸಲಾತಿ ಪಟ್ಟಿಯಲ್ಲಿ ಬಿಸಿಎಂ(ಎ) ವರ್ಗಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಮೀಸಲಾತಿ ಪಟ್ಟಿಯನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಮಲೆನಾಡು ಮುಸ್ಲಿಂ ವೇದಿಕೆ ವತಿಯಿಂದ ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಲೆನಾಡು ಮುಸ್ಲಿಂ ವೇದಿಕೆಯ ಗೌರವಾಧ್ಯಕ್ಷ ಜಾಕೀರ್ ಹುಸೇನ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದಂತೆ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಮುಸ್ಲಿಮರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದವರು ಸಮುದಾಯದ ರಾಜಕೀಯ ಹಕ್ಕುಗಳನ್ನು ಕಡೆಗಣಿಸಬಾರದು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮುಸ್ಲಿಮರ ಮತಗಳನ್ನು ಕೈಬಿಡಲು ಅನಾಮಧೇಯ ವ್ಯಕ್ತಿಗಳು ಅರ್ಜಿ ಸಲ್ಲಿಸಿರುವ ಆರೋಪಗಳ ಬಗ್ಗೆಯೂ ಉನ್ನತ ಮಟ್ಟದ ತನಿಖೆಯಾಗಬೇಕು. ಸುಳ್ಳು ಅರ್ಜಿ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಬಾರದು ಎಂದು ಒತ್ತಾಯಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಮರು ಸ್ಪರ್ಧಿಸಲು ಅವಕಾಶವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಬಿಸಿಎಂ(ಎ) ವರ್ಗಕ್ಕೆ ಅನ್ಯಾಯವಾಗದಂತೆ ಕರಡು ಮೀಸಲಾತಿ ಪಟ್ಟಿಯನ್ನು ಮರುಪರಿಶೀಲಿಸಿ ಸಮರ್ಪಕ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಲೆನಾಡು ಮುಸ್ಲಿಂ ವೇದಿಕೆಯ ಸದಸ್ಯ ಎಂ.ಎಚ್. ಮಹಮ್ಮದ್ ಹನೀಫ್ ಹೈದ್ರೋಸ್ ಮಾತನಾಡಿ, ಮೂಡಿಗೆರೆ ತಾಲೂಕಿನ ಐದು ಜಿಲ್ಲಾ ಪಂಚಾಯಿತಿ ಹಾಗೂ ಒಂಬತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪೈಕಿ ಬಿಸಿಎಂ(ಎ) ವರ್ಗಕ್ಕೆ ಒಂದೇ ಒಂದು ಕ್ಷೇತ್ರವನ್ನೂ ಕರಡು ಮೀಸಲಾತಿ ಪಟ್ಟಿಯಲ್ಲಿ ನೀಡಿಲ್ಲ. ಇದರಿಂದ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಪಡೆಯಲು ತೊಂದರೆಯಾಗಲಿದೆ. ಆದ್ದರಿಂದ ಕರಡು ಮೀಸಲಾತಿ ಪಟ್ಟಿಯನ್ನು ಮಾರ್ಪಡಿಸಿ, ಐದು ಜಿಪಂ ಕ್ಷೇತ್ರಗಳ ಪೈಕಿ ಎರಡು ಹಾಗೂ ಒಂಬತ್ತು ತಾಪಂ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಸಿಎಂ(ಎ) ವರ್ಗದವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮೂಡಿಗೆರೆ ತಾಲೂಕು ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ. ಇಬ್ರಾಹಿಂ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲ ಸಮುದಾಯಗಳಿಗೂ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ಕರಡು ಮೀಸಲಾತಿ ಪಟ್ಟಿಯಲ್ಲಿ ಬಿಸಿಎಂ(ಎ) ವರ್ಗಕ್ಕೆ ಸೂಕ್ತ ಅವಕಾಶ ಕಲ್ಪಿಸದಿರುವುದು ಬೇಸರದ ಸಂಗತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಮೀಸಲಾತಿ ಪಟ್ಟಿಯನ್ನು ಮರುಪರಿಶೀಲಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ತಹಸೀಲ್ದಾರ್ ಎಸ್. ಅಶ್ವಿನಿ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಮಟ್ಟದ ಮಲೆನಾಡು ಮುಸ್ಲಿಂ ವೇದಿಕೆಯ ಅಧ್ಯಕ್ಷ ಅಬ್ರಾರ್ ಅಹಮದ್, ಮೂಡಿಗೆರೆ ತಾಲೂಕು ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ. ಇಬ್ರಾಹಿಂ, ಬಿಳಗುಳ ನೂರುಲ್ಲ ಮಸೀದಿ ಅಧ್ಯಕ್ಷ ಮೊಹಿದ್ದಿನ್ ಸೇಠ್, ಸಬ್ಬೆನಹಳ್ಳಿ ಹಮೀದ್, ಬಿ.ಎಚ್. ಮಹಮ್ಮದ್, ಅಕ್ರಮ್ ಹಾಜಿ, ಝಕರಿಯ ಜಾಕಿರ್, ಆಸಿಫ್, ಅಶ್ರಫ್, ಕೆ.ಪಿ. ಖಾಲಿದ್, ಎಂ.ಯು. ಶರೀಫ್, ಪಿ.ಕೆ. ಹನೀಫ್, ಅಬೂಬಕ್ಕರ್, ಹಳೆಮೂಡಿಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಜುಬೇರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಎಸ್. ಅಶ್ವಿನಿ ಅವರಿಗೆ ಮಲೆನಾಡು ಮುಸ್ಲಿಂ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!