ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಇಂದು ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲವೇ ನೈಜ ಸಾಹಿತಿಗಳನ್ನು ಹೊರತುಪಡಿಸಿದರೆ, ವೇದಿಕೆಯಲ್ಲಿ ರಾಜಕೀಯ ಹಿನ್ನೆಲೆಯುಳ್ಳವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಸಮ್ಮೇಳನದಲ್ಲಿ ಯುವ ಕವಿಗಳ ಕವಿಗೋಷ್ಠಿಗೆ ಅವಕಾಶ ಕಲ್ಪಿಸದಿರುವುದು ಯುವ ಸಾಹಿತಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ ಹಾಗೂ ಬಹಿರಂಗ ಅಧಿವೇಶನಗಳನ್ನು ಹೊರತುಪಡಿಸಿದರೆ, ಸಾಹಿತ್ಯದ ವಿವಿಧ ಆಯಾಮಗಳನ್ನು ಪರಿಚಯಿಸುವ ಬೇರೆ ಯಾವುದೇ ಗೋಷ್ಠಿಗಳು ನಡೆದಿಲ್ಲ. ಗೋಷ್ಠಿಗಳೇ ಇಲ್ಲದ ಇಂತಹ ಸಾಹಿತ್ಯ ಸಮ್ಮೇಳನಗಳ ಅಗತ್ಯವೇನು ಎಂದು ಯುವ ಸಾಹಿತಿ ಪ್ರಿಯಾಂಕ ಪ್ರಶ್ನಿಸಿದ್ದಾರೆ.
ವೇದಿಕೆಯಲ್ಲಿ ಕುಳಿತಿರುವ ಕೆಲವರು ಎಷ್ಟು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ? ಅವರು ಬರೆದಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಿ ನಮ್ಮಂತಹ ಯುವ ಕವಿಗಳಿಗೆ ನೀಡಲಿ. ಇದರಿಂದ ಅವರ ಸಾಹಿತ್ಯಿಕ ಕೊಡುಗೆಯಾದರೂ ಯುವಪೀಳಿಗೆಗೆ ಪರಿಚಯವಾಗುತ್ತದೆ ಎಂದು ಪ್ರಿಯಾಂಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜ್ಯದ ವಿವಿಧ ಭಾಗಗಳ ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಿ, ಅವರ ಅನುಭವ, ವಿಚಾರಧಾರೆ ಹಾಗೂ ಸಾಹಿತ್ಯಿಕ ಭಾಷಣಗಳಿಗೆ ವೇದಿಕೆ ಕಲ್ಪಿಸಲಾಗುತ್ತಿತ್ತು. ಇಂತಹ ಸಾಹಿತಿಗಳ ಮಾತುಗಳನ್ನು ಆಲಿಸಿದ ಯುವಪೀಳಿಗೆ ಸಾಹಿತ್ಯದತ್ತ ಆಕರ್ಷಿತರಾಗಿ, ತಾವೂ ಬರಹಗಾರರಾಗಬೇಕು ಎಂಬ ಆಸಕ್ತಿ ಬೆಳೆಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಲೋಕವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಾಹಿತ್ಯ ಪರಿಷತ್ತಿನ ಮೇಲಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಬದಲು ಪರಿಷತ್ತನ್ನು ವಿಭಜಿಸುವ ಕೆಲಸಕ್ಕೆ ಜಿಲ್ಲಾಧ್ಯಕ್ಷ ಅಜ್ಜಂಪುರ ಸೂರಿ ಶ್ರೀನಿವಾಸ್ ಅವರು ಮುಂದಾಗಿರುವುದು ದುರದೃಷ್ಟಕರ ಎಂದು ಸಾಹಿತ್ಯ ಪ್ರೇಮಿ ಹಾಗೂ ಪತ್ರಕರ್ತ ರಾಘವೇಂದ್ರ ಕೆಸವಳಲು ಟೀಕಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಒಂದೇ ಘಟಕವನ್ನು ಮೂರು ಘಟಕಗಳಾಗಿ ವಿಭಜಿಸುವ ಮೂಲಕ ಸಾಹಿತ್ಯದ ಗಂಧಗಾಳಿಯೇ ಗೊತ್ತಿಲ್ಲದವರಿಗೂ ಅವಕಾಶ ಕಲ್ಪಿಸಿದಂತಾಗಿದೆ. ಮಹಿಳಾ ಘಟಕ ಹಾಗೂ ಯುವ ಘಟಕಗಳ ರಚನೆಯ ಉದ್ದೇಶವೇನು? ಘಟಕಗಳ ರಚನೆಯ ಹೆಸರಿನಲ್ಲಿ ಸಾಹಿತಿಗಳನ್ನೇ ಮೂರು ಭಾಗಗಳಾಗಿ ವಿಭಜಿಸಿ ಪರಿಷತ್ತಿನ ಮೂಲ ಆಶಯಕ್ಕೆ ಧಕ್ಕೆ ತರುವುದು ಸರಿಯಲ್ಲ. ಜಿಲ್ಲಾಧ್ಯಕ್ಷರ ವೈಯಕ್ತಿಕ ಪ್ರತಿಷ್ಠೆಗಾಗಿ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಖಂಡನೀಯ. ಇದೇ ರೀತಿ ಮುಂದುವರಿದರೆ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಚಟುವಟಿಕೆಗಳ ಕೇಂದ್ರವಾಗುವ ಬದಲು ‘ಸಾಹಿತ್ಯವಿಲ್ಲದ ಉದ್ಯಮ ಪರಿಷತ್ತು’ ಎಂಬ ಟೀಕೆಗೆ ಗುರಿಯಾಗುವ ದಿನ ದೂರವಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತಿನ ಮೂಲ ಆಶಯಕ್ಕೆ ಅನುಗುಣವಾಗಿ ಸಾಹಿತ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ರಾಜಕೀಯ ಹಾಗೂ ಉದ್ಯಮ ಹಿನ್ನೆಲೆಯ ವ್ಯಕ್ತಿಗಳಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಬಾರದು. ಸದಸ್ಯತ್ವವನ್ನು ರಾಜಕೀಯ ಓಟ್ ಬ್ಯಾಂಕ್ ಆಗಿ ಪರಿವರ್ತಿಸದೆ, ನೈಜ ಸಾಹಿತಿಗಳು, ಬರಹಗಾರರು ಹಾಗೂ ಸಾಹಿತ್ಯಾಸಕ್ತರಿಗೆ ಆದ್ಯತೆ ನೀಡಬೇಕು. ಸಾಹಿತ್ಯಿಕ ಕೊಡುಗೆಯನ್ನು ಸದಸ್ಯತ್ವ ಮತ್ತು ಕಾರ್ಯಕಾರಿ ಸಮಿತಿಯ ರಚನೆಗೆ ಮಾನದಂಡವಾಗಿಟ್ಟುಕೊಳ್ಳಬೇಕು. ಈಗಿರುವ ಸದಸ್ಯತ್ವ ವ್ಯವಸ್ಥೆಯನ್ನೂ ಮರುಪರಿಶೀಲಿಸಿ, ನೈಜ ಸಾಹಿತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿಜವಾದ ಸಾಹಿತಿಗಳನ್ನು ಗುರುತಿಸಿ ಗೌರವಿಸಿ, ಅವರಿಗೆ ಜವಾಬ್ದಾರಿ ನೀಡಿದಾಗ ಮಾತ್ರ ಪರಿಷತ್ತು ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ಒತ್ತಾಯಿಸಿದ್ದಾರೆ.
ಮೂಡಿಗೆರೆ ತಾಲೂಕಿನಲ್ಲಿ ಉತ್ತಮ ಸಾಹಿತ್ಯಿಕ ಪ್ರತಿಭೆಗಳ ಕೊರತೆಯಿಲ್ಲ. ನಂದೀಶ್ ಬಂಕೇನಹಳ್ಳಿ, ತೇಜಸ್ವಿಯವರ ಒಡನಾಡಿಯಾಗಿದ್ದ ಧನಂಜಯ ಜೀವಾಳ, ಬೆಟ್ಟಗೆರೆ ಸಂಪತ್, ಬೆಳಗೋಡು ಕಾರ್ತಿಕ್ ಸೇರಿದಂತೆ ಉತ್ತಮ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಅನೇಕ ಪ್ರತಿಭಾವಂತ ಬರಹಗಾರರಿದ್ದಾರೆ. ಇಂತಹ ಸ್ಥಳೀಯ ಪ್ರತಿಭೆಗಳಿಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಸೂಕ್ತ ಅವಕಾಶ, ಗೌರವ ಹಾಗೂ ಜವಾಬ್ದಾರಿ ನೀಡಬೇಕು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನವೂ ನೈಜ ಸಾಹಿತ್ಯಾಸಕ್ತರಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರಿಗೆ ದೊರೆಯಬೇಕು ಎಂದು ಆಗ್ರಹಿಸಿದ್ದಾರೆ.
