Saturday, November 7, 2026
Homeಜಿಲ್ಲಾಸುದ್ದಿಹೆಸರಿಗೆ ಮಾತ್ರ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆ: ಮೂಲಭೂತ ಸೌಕರ್ಯಗಳಿಲ್ಲದೇ ಪ್ರವಾಸಿಗರ ಬೇಸರ !

ಹೆಸರಿಗೆ ಮಾತ್ರ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆ: ಮೂಲಭೂತ ಸೌಕರ್ಯಗಳಿಲ್ಲದೇ ಪ್ರವಾಸಿಗರ ಬೇಸರ !

Telegram Group
Join Now

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಲೂಕುಗಳಲ್ಲಿ ಒಂದಾಗಿರುವ ಮೂಡಿಗೆರೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ತಾಲೂಕಿನ ದೇವರಮನೆ, ಎತ್ತಿನಭುಜ, ರಾಣಿಜರಿ, ಕೊಟ್ಟಿಗೆಹಾರ, ಚಾರ್ಮುಡಿ ಘಾಟ್, ಕೆಸವಳಲು ಕೂಡಿಗೆ ಸೇರಿದಂತೆ ಹಲವು ಸುಂದರ ಪ್ರವಾಸಿ ತಾಣಗಳಿದ್ದರೂ, ಬಹುತೇಕ ಕಡೆಗಳಲ್ಲಿ ನಾಮಫಲಕಗಳಾಗಲಿ, ಅಗತ್ಯ ಮೂಲಭೂತ ಸೌಕರ್ಯಗಳಾಗಲಿ ಇಲ್ಲದಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಮೂಡಿಗೆರೆ ತಾಲೂಕಿನಲ್ಲಿ 250ಕ್ಕೂ ಹೆಚ್ಚು ಹೋಂಸ್ಟೇ ಹಾಗೂ ರೆಸಾರ್ಟ್‌ಗಳಿದ್ದು, ವರ್ಷಕ್ಕೆ ಐದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಇಷ್ಟೊಂದು ಪ್ರವಾಸಿ ಆಕರ್ಷಣೆ ಹಾಗೂ ಪ್ರವಾಸಿಗರ ಆಗಮನವಿದ್ದರೂ ಪ್ರವಾಸಿ ತಾಣಗಳ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರವಾಸಿ ತಾಣಗಳಲ್ಲಿ ಮಾರ್ಗದರ್ಶಿ ನಾಮಫಲಕ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಹಾಗೂ ಇತರ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಹಾಗೂ ಪ್ರವಾಸಿಗರೊಂದಿಗೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಾಗುತ್ತಿದೆ.

ಕರ್ನಾಟಕ ಧ್ವನಿ ಸಂಘದ ನಗರ ಅಧ್ಯಕ್ಷ ಮನೋಜ್ ಕುಮಾರ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆ ಮೂಡಿಗೆರೆ ತಾಲೂಕನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ದೇವರಮನೆ, ಎತ್ತಿನಭುಜ ಮತ್ತು ರಾಣಿಜರಿ ಪ್ರವಾಸಿ ತಾಣಗಳು ಪ್ರಸಿದ್ಧಿ ಪಡೆದಿವೆ. ಆದರೆ ಸ್ಥಳೀಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಮಾತ್ರ ಈ ಪ್ರವಾಸಿ ತಾಣಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಸ್ಥಳೀಯರು ಹಾಗೂ ಪ್ರವಾಸಿಗರೊಂದಿಗೆ ಅಧಿಕಾರಿಗಳು ದುರ್ವರ್ತನೆ ತೋರುತ್ತಿರುವ ಆರೋಪಗಳೂ ಕೇಳಿಬರುತ್ತಿವೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆಂಪೇಗೌಡ ಸಂಘದ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಮಾತನಾಡಿ, ಮೂಡಿಗೆರೆ ತಾಲೂಕಿನ ಹಲವು ಪ್ರವಾಸಿ ತಾಣಗಳು ಗೂಗಲ್ ಮ್ಯಾಪ್‌ನಲ್ಲಿ ಸಕಲೇಶಪುರ ತಾಲೂಕಿಗೆ ಸೇರಿದ ಸ್ಥಳಗಳೆಂಬಂತೆ ಗುರುತಿಸಲ್ಪಡುತ್ತಿವೆ. ಇದರಿಂದ ಮೂಡಿಗೆರೆಯ ಪ್ರವಾಸೋದ್ಯಮಕ್ಕೆ ಸಾಕಷ್ಟು ನಷ್ಟವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಕನಿಷ್ಠ ಒಂದು ನಾಮಫಲಕವನ್ನೂ ಅಳವಡಿಸಿಲ್ಲ. ಪ್ರವಾಸಿಗರಿಗೆ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯನಿರ್ವಹಿಸುತ್ತಿರುವುದಾದರೂ ಏಕೆ? ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮೂಡಿಗೆರೆ ಹಾಗೂ ಕಳಸ ಭಾಗದಲ್ಲಿ ಹೋಂಸ್ಟೇ ಮತ್ತು ರೆಸಾರ್ಟ್‌ಗಳಿಗೆ ಪರವಾನಗಿ ನೀಡುವುದಕ್ಕಷ್ಟೇ ಪ್ರವಾಸೋದ್ಯಮ ಇಲಾಖೆ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ, ಮೂಡಿಗೆರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಪ್ರವಾಸಿ ತಾಣಗಳ ಗುರುತಿಸುವಿಕೆ, ನಾಮಫಲಕ ಅಳವಡಿಕೆ, ಗೂಗಲ್ ಮ್ಯಾಪ್‌ನಲ್ಲಿನ ಸ್ಥಳಗಳ ದೋಷ ಸರಿಪಡಿಸುವಿಕೆ ಹಾಗೂ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!