ಮೂಡಿಗೆರೆ: ಸಾಹಿತ್ಯ, ಕಲೆ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೇ ಮಕ್ಕಳ ಕಲಾ ಪ್ರದರ್ಶನಕ್ಕೆ ಅರ್ಧದಲ್ಲೇ ಕತ್ತರಿ ಹಾಕುವ ಮೂಲಕ ಮಕ್ಕಳ ಪ್ರತಿಭೆಗೆ ಅವಮಾನ ಮಾಡಿದ್ದರಿಂದ ಪೋಷಕರು ಆಯೋಜಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆ, ಸಮ್ಮೇಳನಾಧ್ಯಕ್ಷರ ಭಾಷಣ ಹಾಗೂ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತ ಗೋಷ್ಠಿ ಗಮನ ಸೆಳೆದವು. ಆದರೆ ಸರಕಾರಿ ಶಾಲೆಗಳ ಸಬಲೀಕರಣದ ಕುರಿತು ಗೋಷ್ಠಿ ಆಯೋಜಿಸಿದ್ದರೂ, ವಿಷಯದ ಗಂಭೀರತೆ ಅರಿತು ಚರ್ಚಿಸುವ ಪ್ರಯತ್ನ ನಡೆಯಲಿಲ್ಲ. ಸ್ಥಳೀಯ ಬರಹಗಾರರ ಪ್ರತಿಭೆ ಅನಾವರಣಗೊಳಿಸಬೇಕಿದ್ದ ಕವಿಗೋಷ್ಠಿಗೂ ಅವಕಾಶ ಕಲ್ಪಿಸಿರಲಿಲ್ಲ. ಬದಲಾಗಿ ಕೆಲವರ ಸುದೀರ್ಘ ಹಾಗೂ ವಿಷಯಕ್ಕೆ ಪೂರಕವಲ್ಲದ ಭಾಷಣದಿಂದ ಸಾರ್ವಜನಿಕರಿಗೆ ಬೇಸರ ಮೂಡುವ ಜತೆಗೆ ಅಮೂಲ್ಯ ಸಮಯವೂ ವ್ಯರ್ಥವಾಯಿತು.
ಸಮಾರೋಪ ಸಮಾರಂಭ ಸಂಜೆ 7 ಗಂಟೆಗೆ ಮುಕ್ತಾಯಗೊಂಡಿದ್ದರೂ, ಸಾಂಸ್ಕೃತಿಕ ಕಾರ್ಯಕ್ರಮ ಆರಂಭಿಸಲು ಮತ್ತೊಂದು ಸಭೆ ನಡೆಸುವ ಮೂಲಕ ವಿಳಂಬ ಮಾಡಲಾಯಿತು. ಅಂತಿಮವಾಗಿ ರಾತ್ರಿ 8 ಗಂಟೆಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ಭರತನಾಟ್ಯ, ಯಕ್ಷಗಾನ ಹಾಗೂ ಜಾನಪದ ಸೇರಿದಂತೆ ವಿವಿಧ ಕಲಾ ಪ್ರಕಾರದ ನೃತ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಆದರೆ ಸಮಯದ ಅಭಾವದ ನೆಪವೊಡ್ಡಿದ ಆಯೋಜಕರು, ಮಕ್ಕಳು ನೃತ್ಯ ಮಾಡುತ್ತಿದ್ದಾಗಲೇ ಹಾಡನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸುವಂತೆ ಮಾಡಿದರು. ಸ್ಥಳೀಯ ಪ್ರತಿಭೆಗಳು ಪ್ರದರ್ಶಿಸುತ್ತಿದ್ದ ಮಲ್ಲಗಂಬಕ್ಕೂ ಇದೇ ರೀತಿಯಲ್ಲಿ ಅರ್ಧದಲ್ಲೇ ತೆರೆ ಎಳೆಯಲಾಯಿತು.
ತಿಂಗಳುಗಟ್ಟಲೆ ಅಭ್ಯಾಸ ಮಾಡಿ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಬಂದಿದ್ದ ಮಕ್ಕಳಿಗೆ ಇಂತಹ ಅನುಭವ ಎದುರಾಗಿದ್ದರಿಂದ ಮಕ್ಕಳ ಉತ್ಸಾಹಕ್ಕೆ ತಣ್ಣೀರೆರಚಿದಂತಾಯಿತು. ಕಲೆಯನ್ನು ಗೌರವಿಸಬೇಕಾದ ಸಾಹಿತ್ಯ ಸಮ್ಮೇಳನದಲ್ಲೇ ಕಲಾ ಪ್ರದರ್ಶನಕ್ಕೆ ಅವಮಾನವಾದರೆ ಇಂತಹ ಸಮ್ಮೇಳನಗಳ ಅವಶ್ಯಕತೆ ಏನಿತ್ತೆಂದು ಪೋಷಕರು ಅಸಮಾಧಾನದಿಂದಲೇ ಮನೆಗೆ ಮರಳಿದರು.
ಸಮ್ಮೇಳನವೆಂದರೆ ಕೇವಲ ಭಾಷಣ, ವೇದಿಕೆ, ಸನ್ಮಾನ ಮತ್ತು ಔತಣಕೂಟಕ್ಕೆ ಸೀಮಿತವಾಗಬಾರದು. ಸಾಹಿತ್ಯ, ಭಾಷೆ, ಕಲೆ, ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಕ್ರೀಡೆಗಳಿಗೆ ಸಮಾನ ಆದ್ಯತೆ ನೀಡಬೇಕು. ಆದರೆ ಕಲೆ, ಪ್ರತಿಭೆಯನ್ನು ಗೌರವಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಮರೆತು, ಸಮಯ ನಿರ್ವಹಣೆಗಾಗಿ ಮಕ್ಕಳ ಕಲಾ ಪ್ರದರ್ಶನಕ್ಕೇ ಕತ್ತರಿ ಹಾಕಿದ್ದು ಸಮ್ಮೇಳನದ ಆಶಯಕ್ಕೆ ವಿರುದ್ಧವಾದ ನಡೆ ಎಂಬ ಟೀಕೆ ವ್ಯಕ್ತವಾಗಿದೆ.
