ಚಿಕ್ಕಮಗಳೂರು: ಕಾಡಾನೆಗಳನ್ನು ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರಿನ ಮೂಡಿಗೆರೆ ಭಾಗಕ್ಕೆ ಓಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕಚೇರಿಗೆ ಸಲ್ಲಿಸಿರುವ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕರ ಜನಾಕ್ರೋಶ ತಮ್ಮ ಮೇಲೆ ಬರದಂತೆ ತಡೆಯಲು ಜಿಲ್ಲೆಯ ಮೂವರು ಶಾಸಕರು ರಾಜೀನಾಮೆ ಕೊಡುವುದಾಗಿ ಹೇಳುತ್ತಿದ್ದಾರೆ ಎಂದು ಸಿ.ಟಿ. ರವಿ ಟೀಕಿಸಿದ್ದಾರೆ. ಶಾಸಕರೇ ರಾಜೀನಾಮೆ ಕೊಡುವುದಲ್ಲ; ಬದಲಿಗೆ ಚಿಕ್ಕಮಗಳೂರಿಗೆ ಆನೆಗಳನ್ನು ಅಟ್ಟುತ್ತೇನೆ ಎಂದ ಸಚಿವ ಶಿವಲಿಂಗೇಗೌಡ ಅವರ ರಾಜೀನಾಮೆಯನ್ನು ಕೇಳಬೇಕಿತ್ತು ಅಥವಾ ಆನೆಗಳು ಇಲ್ಲಿಗೆ ಬರದಂತೆ ತಡೆಯಬೇಕಿತ್ತು ಎಂದು ಅವರು ಆಗ್ರಹಿಸಿದ್ದಾರೆ. ಈ ಎರಡೂ ಕೆಲಸಗಳನ್ನು ಮಾಡದೆ ಶಾಸಕರು ಸುಮ್ಮನೆ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ಕೊಡುತ್ತೇವೆ ಎಂದು ಹೇಳಿದರೂ ಅವರು ಕೊಡುವುದಿಲ್ಲ ಎಂಬುದು ತಮಗೆ ಗೊತ್ತಿದೆ ಎಂದ ಸಿ.ಟಿ. ರವಿ, ಒಂದು ವೇಳೆ ಕೊಟ್ಟರೂ ಅದು ಸ್ವೀಕೃತವಾಗದ ರೀತಿಯಲ್ಲಿ ಕೊಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ರಾಜೀನಾಮೆ ಪತ್ರದಲ್ಲಿ ಒಂದೇ ಸಾಲಿನಲ್ಲಿ ಸ್ಪಷ್ಟವಾಗಿ ಬರೆದರೆ ಮಾತ್ರ ಅದು ಸ್ವೀಕೃತವಾಗುತ್ತದೆ; ಕಥೆ-ಪುರಾಣ ಬರೆದರೆ ಅದು ಸ್ವೀಕಾರವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಚಿವರಾಗಿ ಚಿಕ್ಕಮಗಳೂರಿಗೆ ಆನೆಗಳನ್ನು ಅಟ್ಟುತ್ತೇನೆ ಎಂದು ಹೇಳಿದ ಶಿವಲಿಂಗೇಗೌಡ ಅವರಿಂದ ರಾಜೀನಾಮೆ ಕೇಳುವ ಧೈರ್ಯವನ್ನು ಶಾಸಕರು ತೋರಿಸಿಲ್ಲ ಎಂದು ಸಿ.ಟಿ. ರವಿ ಕಿಡಿಕಾರಿದ್ದಾರೆ.
