ಎನ್. ಆರ್. ಪುರ: ಹಾಸನದಿಂದ ಕಾಡಾನೆಗಳನ್ನು ಚಿಕಮಗಳೂರು ಭಾಗಕ್ಕೆ ಸ್ಥಳಾಂತರ ವಿರೋಧಿಸಿ ತೀವ್ರ ಪ್ರತಿಭಟನೆ, ಆಕ್ರೋಶದ ನಡುವೆಯೇ ಕಾಫಿನಾಡಿನಲ್ಲಿ ಆನೆಗಳು ಮತ್ತಷ್ಟು ಆತಂಕ ಸೃಷ್ಟಿಸಿವೆ. ಜಿಲ್ಲೆಯ ಎನ್.ಆರ್.ಪುರ ಪಟ್ಟಣದ ಲಿಂಗಾಪುರ ಗ್ರಾಮದ ಸಮೀಪ ಗಜಪಡೆ ಕಾಣಿಸಿಕೊಂಡಿದ್ದು,ಅವನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಲಿಂಗಾಪುರ ಗ್ರಾಮದ ಚಂದ್ರಪ್ಪ ಎಂಬುವರಿಗೆ ಸೇರಿದ ತೋಟದಲ್ಲಿ ಕಾಡಾನೆ ತನ್ನ ಮರಿಯೊಂದಿಗೆ ಕಾಣಿಸಿಕೊಂಡಿದೆ. ತೋಟದಲ್ಲಿ ಕೆಲಸಮಾಡುವಾಗ ತಾಯಿ ಆನೆ ಕಾಣಿಸಿಕೊಂಡಿದ್ದು ಏನಾದರೂ ಮಾಡಬಹುದೆಂದು ಜನರು ಓಡಿಹೋಗಿದ್ದಾರೆ.
4 ದಿನಗಳಿಂದ ಸಿಕ್ಕ ಸಿಕ್ಕ ಕಡೆ ಗಜಪಡೆ ಸಂಚಾರ ಮಾಡುತ್ತಿದ್ದು, ಕಾಫಿ ಕೊಯ್ಲು ಸಮಯದಲ್ಲೇ ಕಾಡಾನೆಗಳ ಸಂಚಾರ ಮತ್ತಷ್ಟು ಭೀತಿ ಸೃಷ್ಟಿಸಿದೆ. ಹೀಗಾಗಿ ಕಾಫಿತೋಟಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
