ಮೂಡಿಗೆರೆ: ಪಶು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೋರಿಯೊಂದು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಇಂದು ಬೆಳಗ್ಗೆ ೯.೩೦ ರ ಸುಮಾರಿಗೆ ಮೂಡಿಗೆರೆ ಪಟ್ಟಣದ ವೇಣುಗೋಪಾಲ ದೇವಸ್ಥಾನದ ಬಳಿ ಎರಡು ಹೋರಿಗಳ ನಡುವೆ ಗುದ್ದಾಟ ನಡೆದಿದ್ದು, ಒಂದು ಹೋರಿ ಗಂಭೀರ ಗಾಯಗೊಂಡು ಸುಸ್ತಾಗಿ ಬಿದ್ದಿತ್ತು. ಇದನ್ನ ಕಂಡ ಸಾರ್ವಜನಿಕರು ಕೂಡಲೇ ಪಶು ಆಸ್ಪತ್ರೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದ್ರೆ ಮಾಹಿತಿ ನೀಡಿ ಒಂದೂವರೆ ಗಂಟೆ ಕಳೆದರೂ ಆಂಬುಲೆನ್ಸ್ ಬಾರದಿದ್ದಕ್ಕೆ ಸ್ಥಳೀಯರೇ ವಾಹನವೊಂದರಲ್ಲಿ ಹೋರಿಯನ್ನು ತುಂಬಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಹೋರಿಯನ್ನು ತೆಗೆದುಕೊಂಡು ಹೋದ್ರೂ ಅಲ್ಲಿನ ಸಿಬ್ಬಂದಿ ಕ್ಯಾರೇ ಎಂದಿಲ್ಲ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಹೋರಿ ಕೊನೆಗೆ ಸಾವನ್ನಪ್ಪಿದೆ. ಇದ್ರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಶು ಆಸ್ಪತ್ರೆ ಎದುರೇ ಹೋರಿಯ ಶವವನ್ನಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಪಶು ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಪಶು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಹಸುಗಳು ಸಾವನ್ನಪ್ಪಿವೆ. ಎಷ್ಟೇ ಮನವಿ ಮಾಡಿದ್ರೂ ಪಶುಗಳ ಸೇವೆಗೆ ಸಿಗದ ಆಸ್ಪತ್ರೆ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಹೆಸರಿಗಷ್ಟೇ ಇದೊಂದು ಆಸ್ಪತ್ರೆ ಎನಿಸಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಸಮಸ್ಯೆ ಬಗೆಹರಿಸಿಬೇಕು, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.