ಹಾಸನ: 2024 ರ ಲೋಕಸಭಾ ಚುನಾವಣೆಯಲ್ಲಿ NDA ಅಭ್ಯರ್ಥಿಗೆ ಮತ ಹಾಕಲಿಲ್ಲ ಎಂದು ಆರೋಪಿಸಿ ,ರೈತರು ತಂದಿದ್ದ ಲೀಟರ್ ಗಟ್ಟಲೆ ಹಾಲನ್ನು ಡೈರಿಯಲ್ಲಿ ತೆಗೆದುಕೊಳ್ಳದೆ ವಾಪಸ್ ಕಳಿಸಿರುವ ಘಟನೆ ನಡೆದಿದೆ. ದುದ್ದ ಹೋಬಳಿ, ಸೋಮನಹಳ್ಳಿ ಗ್ರಾಮದಲ್ಲಿ ಹಾಲನ್ನು ಸ್ವೀಕರಿಸದೆ, ಹಾಲಿನ ಕ್ಯಾನ್ ಗಳನ್ನು ವಾಪಾಸ್ ಕಳಿಸಲಾಗಿದೆ.

ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಆದೇಶದ ಮೇರೆಗೆ ಹಾಲಿನ ಕ್ಯಾನ್ ಗಳನ್ನು ವಾಪಸ್ ಕಳಿಸಲಾಗಿದೆ ಅಂತ ಆರೋಪಿಸಿ , ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಹಾಲಿನ ಕ್ಯಾನ್ ಗಳನ್ನು ಇಟ್ಟು ಪ್ರತಿಭಟನೆ ಮಾಡಿದರು. ಈ ದುರುದ್ದೇಶದ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಯೋಗಣ್ಣ, ಪರಮೇಶ ಸೇರಿದಂತೆ ಹಲವರಿದ್ದಾರೆ. ಇವ್ರೆಲ್ಲ ಸೇರಿಕೊಂಡು ನಮ್ಮಿಂದ ಹಾಲು ಪಡೆಯದಂತೆ ಒತ್ತಡ ಹೇರಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಕೂಡಲೇ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾಗೆ ಮನವಿ ಸಲ್ಲಿಸಿದರು.
