ಜಯಪುರ : ಕಾಡುಕೋಣ ದಾಳಿಯಿಂದ ಕೃಷಿಕರೊಬ್ಬರು ಗಾಯಗೊಂಡಿರುವ ಘಟನೆ ಭುವನಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ಸೆ ಜಂಬೆನಾಡು ಗ್ರಾಮದಲ್ಲಿ ನಡೆದಿದೆ.
ಪ್ರಕಾಶ್ ಮೂರ್ತಿ(62) ಕಾಡುಕೋಣ ದಾಳಿಯಿಂದ ಗಾಯಗೊಂಡವರು. ಶುಕ್ರವಾರ ಬೆಳಗ್ಗೆ 7:30ಕ್ಕೆ ತಮ್ಮ ಕೃಷಿ ಜಮೀನಿನಲ್ಲಿ ಕಾಡುಕೋಣ ದಾಳಿ ಮಾಡಿದೆ. ಘಟನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಗಾಯಗೊಂಡ ಅವರನ್ನು ಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅರಣ್ಯಾಧಿಕಾರಿಗಳಾದ ಮಧುಕರ, ಚಂದ್ರನಾಯಕ್ ಆಸ್ಪತ್ರೆಗೆ ಭೇಟಿ ನೀಡಿ
ಘಟನೆ ಬಗ್ಗೆ ಮಾಹಿತಿ ಪಡೆದರು.
ಜಮೀನಿಗೆ ಗೊಬ್ಬರ ತೆಗೆದುಕೊಂಡು ಹೋಗುವಾಗ ದಿಢೀರನೆ ಕಾಡುಕೋಣ ದಾಳಿ ಮಾಡಿತು. ಸ್ವಲ್ಪ ಸಮಯದ ನಂತರ ಸ್ಥಳೀಯರು ನನ್ನನ್ನು ಜಯಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಈ ಮಾರ್ಗದಲ್ಲಿ ದಿನನಿತ್ಯ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು ಸೇರಿದಂತೆ ಅನೇಕರು ತಿರುಗಾಡುತ್ತಿರುತ್ತಾರೆ. ಕಾಡು ಪ್ರಾಣಿಗಳು ದಾಳಿ ಮಾಡಿದರೆ ಈ ಮಾರ್ಗದಲ್ಲಿ ತಿರುಗಾಡುವುದು ಕಷ್ಟವಾಗುತ್ತದೆ. ಅರಣ್ಯ ಇಲಾಖೆ ಗಮನಹರಿಸಬೇಕು ಎಂದು ಕಾಡುಕೋಣ ದಾಳಿಯಿಂದ ಗಾಯಗೊಂಡ ಪ್ರಕಾಶ್ ಮೂರ್ತಿ ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.

