ಬೆಂಗಳೂರು : ಮುಡಾ ಅಕ್ರಮ ಸಂಬಂಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಸಿಎಂ ವಿರುದ್ಧ ವಿಪಕ್ಷಗಳ ಆಕ್ರೋಶ ಹೆಚ್ಚಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ಹಾಗೂ ಜೆಡಿಎಸ್ ಭಾರಿ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿ ನಾಯಕರು, ಕಾರ್ಯಕರ್ತರು ಬುಧವಾರ ಬೆಂಗಳೂರಿನಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬೆಂಗಳೂರಿನ ಕುಮಾರ ಕೃಪ ಗೆಸ್ಟ್ ಹೌಸ್ ಬಳಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಯತ್ನಿಸಿದರು. ಈ ವೇಳೆ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಮತ್ತೊಂದೆಡೆ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮತ್ತೊಂದೆಡೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ಕೈಗೊಂಡಿದೆ. ಸರ್ಕಾರ, ಸಿಎಂ ವಿರುದ್ಧ ಘೋಷಣೆ ಕೂಗಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು. ನೈತಿಕತೆ ಹೊತ್ತು ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಆಗ್ರಹಿಸಿದರು.
