ಮಡಿಕೇರಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಸುಂಟಿಕೊಪ್ಪ ಬಳಿಯ ಕೆದಕಲ್ ನಿವಾಸಿ ಶಿವಪ್ರಕಾಶ್(47) ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಅಪರಾಧಿ. 08-03-2022 ರಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 354(a), 376(2), (1) IPC & 4 & 8 POSCO ACT ಅಡಿಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು 10-03-2022ರಂದು ಆರೋಪಿ ಶಿವಪ್ರಕಾಶ್ ಅಲಿಯಾಸ್ ಶಶಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ತನಿಖಾಧಿಕಾರಿಗಳಾದ ಕೊಡಗು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುದ್ದುಮಾದೇವ, ಸಬ್ ಇನ್ಸ್‌ಪೆಕ್ಟರ್ ಕೆ.ಬಿ. ಅಚ್ಚಮ್ಮ, ಮಹಿಳಾ ಹೆಡ್ ಕಾನ್ಸ್‌ಟೇಬಲ್‌ಗಳಾದ ಕುಮಾರಿ, ಎಚ್.ಎಸ್. ಶ್ರೀನಿವಾಸ್ ಇವರುಗಳು ತನಿಖಾ ಸಹಾಯಕರಾಗಿ ಕಾರ್ಯನಿರ್ವಹಿದ್ದರು. ಆರೋಪಿ ಶಿವಪ್ರಕಾಶ್ ಅಲಿಯಾಸ್ ಶಶಿ ವಿರುದ್ಧ ದಿನಾಂಕ 07-05-2022 ರಂದು ದೋಷಾರೋಪಣಾ ವರದಿಯನ್ನು ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಸೆ.27ರಂದು ಆರೋಪಿ ಶಿವಪ್ರಕಾಶ್‌ಗೆ ಕಲಂ 376(2)(ಎಫ್) ಐಪಿಸಿ ಅಡಿಯಲ್ಲಿ 10 ವರ್ಷಗಳ ಕಾರಾಗೃಹ ಕಠಿಣ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ರೂ. ದಂಡ, ಹಾಗೂ ಕಲಂ 354(ಎ) (1) ಐಪಿಸಿ ರಲ್ಲಿ 1 ವರ್ಷ ಕಾರಾಗೃಹ ಕಠಿಣ ಶಿಕ್ಷೆ ಮತ್ತು ರೂ. ಐದು ಸಾವಿರ ದಂಡ ವಿಧಿಸಿದೆ ಹಾಗೂ ನೊಂದ ಬಾಲಕಿಗೆ ನಾಲ್ಕು ಲಕ್ಷ ರೂ. ಪರಿಹಾರ ಒದಗಿಸುವಂತೆ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ತೀರ್ಪು ನೀಡಿದ್ದಾರೆ. ಸಂತ್ರಸ್ತ ಬಾಲಕಿ ಪರ ಸರ್ಕಾರಿ ಅಭಿಯೋಜಕರಾದ ರುದ್ರಪ್ರಸನ್ನ ವಾದ ಮಂಡಿಸಿದ್ದರು.
