ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ನಡುವೆ ಅವರ ಬಂದೂರು ಲೈಸೆನ್ಸ್ ರದ್ದಾಗುವ ಸಾಧ್ಯತೆ ಆತಂಕವೂ ದರ್ಶನ್‌ಗೆ ಇದೆ. ಏತನ್ಮಧ್ಯೆ ದರ್ಶನ್ ಪೊಲೀಸರಿಗೆ ಮನವಿ ಮಾಡಿದ್ದು, ಕೊಲೆ ಪ್ರಕರಣದಲ್ಲಿ ಜಾಮೀನು ನೀಡುವಾಗ ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ. ನನ್ನ ಭದ್ರತೆಗೆ ಬಂದೂಕಿನ ಅಗತ್ಯವಿದೆ. ಹೀಗಾಗಿ ನನಗೆ ನೀಡಿರುವ ಬಂದೂಕು ಪರವಾನಗಿ ರದ್ದು ಪಡಿಸದಂತೆ ನಗರದ ಡಿಸಿಪಿಗೆ (ಆಡಳಿತ) ನಟ ದರ್ಶನ್ ಮನವಿ ಮಾಡಿದ್ದಾರೆ.
ದರ್ಶನ್‌ಗೆ ನೀಡಲಾಗಿದ್ದ ಬಂದೂಕು ಪರವಾನಗಿ ಹಿಂಪಡೆಯುವ ಬಗ್ಗೆ ಡಿಸಿಪಿ ನೋಟಿಸ್ ನೀಡಿದ್ದರು. ಈ ನೋಟಿಸ್‌ಗೆ ದರ್ಶನ್ ಉತ್ತರಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ನಾನು ಕಾನೂನಾತ್ಮಕವಾಗಿ ಜಾಮೀನು ಪಡೆದುಕೊಂಡಿದ್ದೇನೆ. ಅಲ್ಲದೆ ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡುತ್ತಿದ್ದೇನೆ. ಬೆಂಗಳೂರಿನ ಹೊರಗೆ ಹೋಗುವ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಸಹ ಪಡೆದಿದ್ದೇನೆ. ಹೀಗಾಗಿ ಬಂದೂಕು ಪರವಾನಗಿ ರದ್ದುಪಡುವ ಅಗತ್ಯವೇ ಇಲ್ಲವೆಂದು ದರ್ಶನ್ ಉತ್ತರಿಸಿದ್ದಾರೆ.
ಬಂದೂಕು ಪರವಾನಗಿ ಸಂಬಂಧ ದರ್ಶನ್ ಅವರು ನೋಟಿಸ್‌ಗೆ ನೀಡಿರುವ ಉತ್ತರವನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
