ಮಂಗಳೂರು : ರಾಜ್ಯದಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದೆ. ಬೀದರ್ನಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದರೋಡೆ ಪ್ರಕರಣದ ಮಾರನೇ ದಿನವೇ ಮಂಗಳೂರಿನಲ್ಲಿ ಹಾಡುಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿದ ದರೋಡೆಕೋರರು ಹಣ ಎಗರಿಸಿ ಪರಾರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಕೆ.ಸಿ. ರೋಡ್‌ನಲ್ಲಿರುವ ಕೋಟೆಕಾರು ಬ್ಯಾಂಕ್ ಈ ಕೃತ್ಯ ನಡೆದಿದೆ. ಕಾರಿನಲ್ಲಿ ಬಂದ ಐದು ಮಂದಿ ಆಗಂತುಕರ ತಂಡ ಬಂದೂಕು ತೋರಿಸಿ ದರೋಡೆ ನಡೆಸಿದೆ. ಕೆಲವೇ ನಿಮಿಷದಲ್ಲಿ ಚಿನ್ನ ಒಡವೆ, ನಗದು ದೋಚಿ ಪರಾರಿಯಾಗಿದೆ.
ಮುಸುಕುದಾರಿಗಳು ಒಳಗೆ ಬಂದಾಗ ಬ್ಯಾಂಕ್ನಲ್ಲಿ ಐದು ಜನ ಸಿಬ್ಬಂದಿ ಮಾತ್ರ ಇದ್ದರು. ಗ್ರಾಹಕರು ಇರಲಿಲ್ಲ. ಎಲ್ಲರನ್ನು ಕೆಳಗೆ ಕುಳಿತುಕೊಳ್ಳಿ ಎಂದು ಹೇಳಿದ ತಂಡ ಲಾಕರ್ನ ಕೀ ಕೊಡುವಂತೆ ಕೇಳಿದ್ರು. ಮ್ಯಾನೇಜರ್ ಆದೇ ತಾನೆ ಬಂದಿದ್ದರಿಂದ ಲಾಕರ್ ಓಪನ್ ಇತ್ತು. ಈ ವೇಳೆ ಹಣ, ಚಿನ್ನಾಭರಣ ದೋಚಿದ್ದಾರೆ. ಬಂದವರೆಲ್ಲ ಹಿಂದಿ ಮಾತನಾಡುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ರಾಮಚಂದ್ರ ತಿಳಿಸಿದ್ದಾರೆ.
ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ವಿಚಾರ ತಿಳಿದು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸಿಎಂ ಸಿದ್ದರಾಮಯ್ಯ ಮಂಗಳೂರು ಪ್ರವಾಸದ ದಿನವೇ ಈ ಘಟನೆ ನಡೆದಿರೋದು ಕರಾವಳಿ ಜನರನ್ನ ಬೆಚ್ಚಿಬೀಳಿಸಿದೆ.
