Thursday, March 26, 2026
Homeಕ್ರೈಮ್ಹಾಸನ: ತಂದೆಯ ಅಂತ್ಯ ಸಂಸ್ಕಾರ ವೇಳೆ ಬೆಳಕಿಗೆ ಬಂದ ಮಗನ ಕೊಲೆ ಕೇಸ್:‌ ಕೊಲೆ ಮಾಡಿದ್ದಾದ್ರೂ...

ಹಾಸನ: ತಂದೆಯ ಅಂತ್ಯ ಸಂಸ್ಕಾರ ವೇಳೆ ಬೆಳಕಿಗೆ ಬಂದ ಮಗನ ಕೊಲೆ ಕೇಸ್:‌ ಕೊಲೆ ಮಾಡಿದ್ದಾದ್ರೂ ಯಾರು, ಯಾಕೆ?

ಹಾಸನ: ತಂದೆಯ ಅಂತ್ಯ ಸಂಸ್ಕಾರಕ್ಕೆ ಮಗ ಬಾರದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮಗನ ಕೊಲೆ ಪ್ರಕರಣ ಬೆಳಕಿಗೆ ಬಂದಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಸಂತಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಣದ ವಿವಾದದಲ್ಲಿ ತಂದೆಯೇ ಮಗನನ್ನು ಕೊಂದು, ಶವವನ್ನು ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಮರೆಮಾಚಿದ ಆಘಾತಕಾರಿ ಘಟನೆ ಎರಡು ವರ್ಷಗಳ ನಂತರ ಬೆಳಕಿಗೆ ಬಂದಿದೆ. ರಘು (32) ಕೊಲೆಯಾದ ವ್ಯಕ್ತಿ. ಈತ ತನ್ನ ತಂದೆ ಅಂದರೆ ಈಗ ಮೃತಪಟ್ಟಿರುವ ಗಂಗಾಧರ್​ ಅವರಿಂದ 2 ವರ್ಷದ ಹಿಂದೆ ಹತ್ಯೆಗೀಡಾದ ವಿಚಾರ ಈಗ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಂತಬಸವನಹಳ್ಳಿ ಗ್ರಾಮದಲ್ಲಿ ಹತ್ತು ದಿನಗಳ ಹಿಂದೆ ಗಂಗಾಧರ್ ಎಂಬ ವ್ಯಕ್ತಿ ಆ.1ರಂದು ಮೃತಪಟ್ಟಿದ್ದರು. ಈ ವೇಳೆ ಮಗ ರಘು ತಂದೆಯ ಅಂತ್ಯ ಸಂಸ್ಕಾರಕ್ಕೆ ಬಂದಿರಲಿಲ್ಲ. ಬಳಿಕ ಮೂರನೇ ದಿನದ ಹಾಲುತುಪ್ಪದ ಕಾರ್ಯಕ್ಕೂ ಬಂದಿರಲಿಲ್ಲ. ಆ.11ರಂದು ತಂದೆಯ ವೈಕುಂಠ ಸಮಾರಾಧನೆಗೂ ಬಾರದೇ ಇದ್ದುದರಿಂದ ಸಂಬಂಧಿಕರಿಗೆ ಅನುಮಾನ ಮೂಡಿತ್ತು.

ಮಗನನ್ನು ಕರೆಯಿಸಿ ಎಂದು ಆಗ್ರಹ ಮಾಡಿದಾಗ, ಅಣ್ಣ ಕಾರ್ಯಕ್ಕೆ ಬರುವುದಿಲ್ಲ ಎಂದು ಮೃತನ ಬುದ್ಧಿಮಾಂದ್ಯ ಸಹೋದರ ರೂಪೇಶ್ ಮರೆಮಾಚಿದ್ದ. ಇದಾಗಿ 11ನೇ ದಿನದ ಹಾಲುತಪ್ಪುದ ಕಾರ್ಯ ಇದ್ದು ಇದಕ್ಕೂ ಬಾರದ ಹಿನ್ನೆಲೆ ಮೃತ ಗಂಗಾಧರನ ಇನ್ನೊಬ್ಬ ಮಗ (ಬುದ್ಧಿಮಾಂದ್ಯ) ರೂಪೇಶ್​ಗೆ ಫೋನ್‌ ಮಾಡಿ ರಘುವನ್ನು ಬರಲು ಹೇಳುವಂತೆ ಒತ್ತಡ ಹೇರಿದಾಗ, ಈ ರೂಪೇಶ್ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

ಕೊಲೆಯಾದ ಗಂಗಾಧರನ ಪುತ್ರ ರಘು (32) ಬಿಎಂಟಿಸಿಯಲ್ಲಿ ನೌಕರನಾಗಿದ್ದ. ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಆಟದಿಂದ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದ ಎನ್ನಲಾಗಿದೆ. ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಗಂಡನನ್ನು ಸರಿದಾರಿಗೆ ತರಲು ಹೆಂಡತಿ(ರಘು ಪತ್ನಿ) ಪ್ರಯತ್ನ ಪಟ್ಟಿದ್ದಾಳೆ. ಆದರೇ, ಅದು ಫಲಕಾರಿಯಾಗದ ಹಿನ್ನೆಲೆ ಆಕೆ ರಘುವಿನಿಂದ ವಿಚ್ಛೇದನ ಪಡೆದಿದ್ದರು ಎನ್ನಲಾಗಿದೆ. ಹಾಗೇ ಸಾಲ ತೀರಿಸಲು ಬಿಎಂಟಿಸಿಯ ಹಣ ಬಳಕೆ ಮಾಡಿದ್ದ ಎಂಬ ಕಾರಣಕ್ಕೆ ಕೆಲಸದಿಂದ ಅಮಾನತ್ತು ಮಾಡಿದ್ದರು ಎನ್ನುವ ಮಾಹಿತಿ ಇದೆ. ಹೀಗಾಗಿ ಕೆಲಸ ಕಳೆದುಕೊಂಡು ಬಳಿಕ ರಘು ಸ್ವಗ್ರಾಮಕ್ಕೆ ಬಂದು ವಾಸವಾಗಿದ್ದ.

ಸಾಲ ತೀರಿಸಲು ರಘು ಹಣಕ್ಕಾಗಿ ತಂದೆಯನ್ನು ಹಿಂಸೆ ಮಾಡುತ್ತಿದ್ದನಂತೆ. ತಂದೆ ಗಂಗಾಧರನನ್ನು ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದರಿಂದ ಈ ವಿಷಯವು ಜಗಳಕ್ಕೆ ಕಾರಣವಾಗಿ, ಅದೇ ಜಗಳ ತಾರಕಕ್ಕೇರಿದೆ. ಈ ಮಧ್ಯೆ ವಿವಾದದಲ್ಲಿ ಗಂಗಾಧರ ತನ್ನ ಮಗನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಮತ್ತೊಬ್ಬ ಮಗನ(ಬುದ್ಧಿಮಾಂದ್ಯ ರೂಪೇಶ್​) ಜೊತೆ ಸೇರಿ ರಘುವಿನ ಶವವನ್ನು ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಮರೆಮಾಚಿದ್ದರು. ಕೊಲೆಯ ರಹಸ್ಯವನ್ನು ಎಲ್ಲಿಯಾದರೂ ಬಾಯ್ಬಿಟ್ಟರೇ ನಿನ್ನನ್ನು ಕೊಲೆ ಮಾಡುವುದಾಗಿ ಮಗ ರೂಪೇಶ್​ಗೆ ತಂದೆ, ಮೃತ ಗಂಗಾಧರ್​ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ರೂಪೇಶ್​ ಈ ವಿಚಾರವನ್ನು ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ.

ಈ ಬಗ್ಗೆ ಗಂಗಾಧರನ ಸಂಬಂಧಿ ಪಾಲಾಕ್ಷ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಇಂಗು ಗುಂಡಿಯಿಂದ ರಘುವಿನ ದೇಹದ ಮೂಳೆಗಳನ್ನು ಹೊರತೆಗೆದಿದ್ದಾರೆ. ಈ ಮೂಳೆಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!