ಹಾಸನ: ಪಿಎಂಎವೈ ವಸತಿ ಯೋಜನೆಯ 2 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಜಿಲ್ಲಾ ವಸತಿ ನೋಡಲ್ ಅಧಿಕಾರಿ ದುರುಪಯೋಗಪಡಿಸಿಕೊಂಡ ಆರೋಪ ಸಕಲೇಶಪುರದಲ್ಲಿ ಕೇಳಿಬಂದಿದೆ.
ಸಕಲೇಶಪುರ ಜಿಲ್ಲಾ ಪಂಚಾಯಿತಿಯ ವಸತಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ.ಎಂ.ರಾಜೇಶ್ ವಿರುದ್ಧ ಈ ಆರೋಪ ಕೇಳಿಬಂದಿದೆ. 2022 ರವರೆಗೆ ಸಕಲೇಶಪುರ ತಾಲೂಕು ಪಂಚಾಯಿತಿಯಲ್ಲಿ ವಸತಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೇಶ್ ಬಳಿಕ ಜಿಲ್ಲಾ ವಸತಿ ನೋಡಲ್ ಅಧಿಕಾರಿಯಾಗಿ (ಹೆಚ್ಚುವರಿ ಪ್ರಚಾರ) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ.
ಯೋಜನೆಗಳ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಂಡ ಬಗ್ಗೆ ಪಿಡಿಓ ತೆಗೆದ ಫೋಟೋವನ್ನು ತಾಲೂಕು ಪಂಚಾಯಿತಿ ವಸತಿ ನೋಡಲ್ ಅಧಿಕಾರಿ ಪರಿಶೀಲಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಲಿಖಿತವಾಗಿ ಗಮನಕ್ಕೆ ತರಬೇಕು. ನಂತರ ಜಿಲ್ಲಾ ಪಂಚಾಯಿತಿ ಲಾಗಿನ್‍ಗೆ ಕಳುಹಿಸಬೇಕು. ಅದೇ ರೀತಿ ತಾಲೂಕು ಪಂಚಾಯಿತಿ ಲಾಗಿನ್ ನಿರ್ವಹಣೆಯನ್ನು ಲಿಖಿತವಾಗಿ ತರುವುದು ಮತ್ತು ನಿರ್ವಹಣೆ ಮಾಡುವುದು ವಸತಿ ನೋಡಲ್ ಅಧಿಕಾರಿಯ ಪ್ರಮುಖ ಕರ್ತವ್ಯವಾಗಿದೆ. ಈ ಯಾವುದನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೆ ದುರುದ್ದೇಶ ಪೂರ್ವಕವಾಗಿ ಎರಡು ಲಾಗಿನ್‍ಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯೋಜನೆಯ ಫಲಾನುಭವಿಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಸಕಲೇಶಪುರ ತಾಲೂಕು ಪಂಚಾಯಿತಿಯ ವಸತಿ ಲಾಗಿನ್ ಹಾಗೂ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಲಾಗಿನ್ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸುಮಾರು 190ಕ್ಕೂ ಹೆಚ್ಚು ಫಲಾನುಭವಿಗಳ ಅಂದಾಜು 2 ಕೋಟಿ ರೂ.ಗೂ ಹೆಚ್ಚು ಸರ್ಕಾರದ ಅನುದಾನವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಬದಲು ಅವರ ಬೇರೊಂದು ತಾಲೂಕಿನ ವಿವಿಧ ಖಾತೆದಾರರಿಗೆ ಜಮೆ ಮಾಡಲಾಗಿದೆ. ಈ ರೀತಿ ಹಣಕಾಸು ಅವ್ಯವಹಾರ ಮಾಡಲಾಗಿದೆ.
