ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಬ್ಬರದ ಮಳೆ, ಜೊತೆಗೆ ಗಾಳಿಯು ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳಸ, ಮೂಡಿಗೆರೆ, ಕೊಪ್ಪ, ಎನ್ ಆರ್. ಪುರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಘಾಟಿ ವ್ಯಾಪ್ತಿಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ.ಭಾರೀ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದ್ದು, ಕೊಪ್ಪ ತಾಲೂಕಿನ ಹೆಗ್ಗದ್ದೆ ಎಂಬಲ್ಲಿ ಪ್ರವಾಸಿಗರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಫಿ ತೋಟಕ್ಕೆ ಉರುಳಿ ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅರ್ಭಟ ಮುಂದುವರಿದಿದ್ದು ಕಳೆದ ಒಂದು ವಾರದಿಂದ ಮೂಡಿಗೆರೆ ತಾಲೂಕಿನಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಮತ್ತೆ ಮೂರು ವರ್ಷದ ಹಿಂದಿನ ಪ್ರವಾಹ ಮರುಕಳಿಸುವ ಆತಂಕ ಎದುರಾಗಿದೆ. ಇಷ್ಟಾದರೂ ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಜನ ಕಂಗಾಲಾಗುವಂತೆ ಮಾಡಿದೆ.ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಮೂಡಿಗೆರೆ ತಾಲೂಕಿನ ಹೆಸಗೋಡುವಿನಲ್ಲಿ ಕಾಫಿತೋಟ ಜಲಾವೃತವಾಗಿದೆ. ಅಲ್ಲದೇ ನದಿ ಪಾತ್ರದ ಕೆಸವಳಲು ಕೂಡಿಗೆ ಸಂಗಮ ಕೂಡ ಭರ್ತಿ ಆಗಿದೆ.
ತುಂಗಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶೃಂಗೇರಿಯ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ತುಂಗಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಯ ನೀರು ರಸ್ತೆಯ ಮಟ್ಟಕ್ಕೆ ತಲುಪಿದೆ.
ನದಿಪಾತ್ರದ ಹೊಲ, ಗದ್ದೆ, ಮತ್ತು ತೋಟಗಳಿಗೆ ಕೆಲವೆಡೆ ನೀರು ನುಗಿದ್ದು, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಅತಿ ಹೆಚ್ಚು ವರ್ಷಧಾರೆಯಾಗಿದೆ. ಹಾಗಾಗಿ ತುಂಗಾ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ಅತಿಯಾದ ಮಳೆಯಿಂದ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಜನರು ಎಚ್ಚರ ವಹಿಸುವಂತೆ ತಿಳಿಸಲಾಗಿದೆ.
ಕಳಸ ತಾಲೂಕಿನಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿ ಪಾತ್ರಗಳು ಜಲಾವೃತವಾಗಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಶನಿವಾರ ಸಂಜೆಯಿಂದ ಮಳೆಯ ಬಿರುಸು ಹೆಚ್ಚಾಗಿದ್ದು ರಾತ್ರಿ ವೇಳೆ ಗುಡುಗಿನೊಂದಿಗೆ ಮಳೆ ಸುರಿದಿದೆ. ಹೆಬ್ಬಾಳೆಯ ಹಳೇ ಸೇತುವೆ ಮುಳುಗಡೆಯಾಗಿ ನದಿ ಪಾತ್ರಗಳು ಜಲಾವೃತವಾಗಿವೆ. ನದಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟದ ನೀರು ಹರಿದಿದೆ.
ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆ ಮಘೆ ಮಳೆ ರುಸುಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ಮಘೆ ಮಳೆ ಆರಂಭಗೊಂಡಿದ್ದು ಮೊದಲ ದಿನವೇ ಬಿರುಸಿನ ಮಳೆಯಾಗಿದೆ. ಇದೀಗ ಮಘೆ ಮಳೆಯು ಮೊದಲ ದಿನವೇ ಬಿಟ್ಟು ಬಿಡದೆ ಸುರಿದಿದ್ದರಿಂದ ಭದ್ರಾ ನದಿಯು ಮೈದುಂಬಿ ಹರಿಯುತ್ತಿದೆ. ನೀರಿನ ಹರಿವು ಅಪಾಯದಮಟ್ಟ ಮೀರಿದ್ದು ನದಿಯ ಪಾತ್ರದ ಕೆಲವು ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ಕೆಲವು ದಿನಗಳ ಹಿಂದಷ್ಟೆ ನಾಟಿ ಮಾಡಿದ್ದ ಭತ್ತದ ಸಸಿಗಳು ಭದ್ರಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿವೆ. ಭದ್ರಾ ನದಿಯ ಸುತ್ತಮುತ್ತಲೂ ಇರುವ ಸಣ್ಣಪುಟ್ಟ ಹಳ್ಳಗಳೂ ತುಂಬಿ ಹರಿಯುತ್ತಿವೆ. ಭಾರಿ ಮಳೆಯೊಂದಿಗೆ ಕೆಲವೊಮ್ಮೆ ಗಾಳಿಯೂ ಬೀಸುತ್ತಿದ್ದು ಕೆಲವು ಕಡೆಗಳಲ್ಲಿ ಮರಗಳು ಬಿದ್ದಿವೆ.
ಶೃಂಗೇರಿ ತಾಲೂಕಿನಲ್ಲಿ ಭಾನುವಾರ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ತುಂಗೆಯ ಹರಿವು ಹೆಚ್ಚಾಗಿ ಪಟ್ಟಣದ ಪರ್ಯಾಯ ರಸ್ತೆ, ಗಾಂಧಿ ಮೈದಾನ ರಸ್ತೆ ಜಲಾವೃತಗೊಂಡಿವೆ. ಅಲ್ಲಿರುವ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮೆಣಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಸಮೀಪ ಗುಡ್ಡ ಕುಸಿದಿದೆ. ಕೊಚ್ಚವಳ್ಳಿ ಸಮೀಪದ ತೋಟಕ್ಕೆ ನೀರು ನುಗ್ಗಿದೆ. ಭಾರಿ ಮಳೆಯಿಂದಾಗಿ ನದಿ ಸಮೀಪ ಜನರು ತೆರಳದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತೆಕ್ಕೂರೂ ಗ್ರಾಮ ಪಂಚಾಯಿತಿಯ ಬೋಳೂರ ಶರತ್ ಅವರ ಮನೆ ಹತ್ತಿರ ರೋಡ್ ಮೇಲೆ ಮರ ಹಾಗೂ ಗುಡ್ಡ ಕುಸಿದು. ರಸ್ತೆ ಸಂಪೂರ್ಣ ಬಂದ್ ಆಗಿದೆ.
