ಇಂದು ಹಾಸನ ನಗರದ ಎನ್ ಆರ್ ವೃತ್ತದ ಬಳಿ ಇರುವ ಸಂತ ಅಂತೋಣಿಯವರ ದೇವಾಲಯದಲ್ಲಿ ಮರಿಯ ಜಯಂತಿಯನ್ನು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಧರ್ಮಕೇಂದ್ರದ ಗುರುಗಳು, ಸಹ ಗುರುಗಳು, ಆಹ್ವಾನಿತ ಗುರುಗಳು ಮತ್ತು ಭಕ್ತಾದಿಗಳು ಈ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಮೆರೆದರು.
ಕ್ರೈಸ್ತರ ಸುಗ್ಗಿ ಹಬ್ಬ, ಕುಟುಂಬಗಳ ಹಬ್ಬ, ಹೆಣ್ಣುಮಕ್ಕಳ ಹಬ್ಬ ಇನ್ನೂ ಹಲವು ಹೆಸರಿನಿಂದ ಈ ದಿನವನ್ನು ಕರೆಯುವ ಪ್ರತೀತಿ ಇದ್ದು, ಈ ದಿನದಲ್ಲಿ ತಾವು ಬೆಳೆದ ಬೆಳೆಯ ಪ್ರಥಮ ಫಲವನ್ನು ತಂದು ದೇವಾಲಯಕ್ಕೆ ಅರ್ಪಿಸುತ್ತಾರೆ. ಈ ಧಾನ್ಯವನ್ನು ಗುರುಗಳ ಆಶೀರ್ವಚನದೊಂದಿಗೆ ನಂತರದ ಕುಟುಂಬಗಳ ಸಹಭೋಜನದಲ್ಲಿ ಬಳಸಲಾಗುತ್ತದೆ.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಹಾಗೆಯೇ ಎಸ್.ಎಸ್.ಎಲ್.ಸಿ., ಪಿ.ಯುಸಿ., ಪದವಿ, ಮತ್ತು ವೃತ್ತಿಪರ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನೆನಪಿನ ಕಾಣಿಕೆಗಳನ್ನು ಅಂತೆಯೇ ವಿಶಿಷ್ಟ ಸಾಧಕರಿಗೆ, ಮತ್ತು ದಾನಿಗಳಿಗೆ ಆಭಿನಂದನೆ ಮತ್ತು ನೆನಪಿನ ಕಾಣಿಕೆಗಳನ್ನು ನೀಡಲಾಯಿತು.
